ಅಮ್ಮ ಏಳುವಳೆಂದು ರಾತ್ರಿಯಿಡೀ ಮೃತದೇಹದ ಮೇಲೆ ಬಿದ್ದು ಅತ್ತ ಕಂದಮ್ಮ; ಶಾಡ್ನಗರದಲ್ಲಿ ಮಹಿಳೆಯ ಬರ್ಬರ ಕೊಲೆ

ಶಾಡ್ನಗರ (ರಂಗಾರೆಡ್ಡಿ ಜಿಲ್ಲೆ): ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ, ಆಕೆ ಮತ್ತೆಂದೂ ಏಳದ ಲೋಕಕ್ಕೆ ಪಯಣಿಸಿದ್ದಾಳೆ ಎಂಬ ಅರಿವಿಲ್ಲದ ಎರಡೂವರೆ ವರ್ಷದ ಹಸುಗೂಸು, ಇಡೀ ರಾತ್ರಿ ತಾಯಿಯ ಶವದ ಮೇಲೆ ಬಿದ್ದು ಅತ್ತಿರುವ ಅತ್ಯಂತ ದಾರುಣ ಘಟನೆ ರಂಗಾರೆಡ್ಡಿ ಜಿಲ್ಲೆಯ ರಂಗಾರೆಡ್ಡಿಗುಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಶೋಭಾ (31) ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲವು ವರ್ಷಗಳಿಂದ ನರಸಿಂಹಲು ಎಂಬಾತನೊಂದಿಗೆ ಸಹಜೀವನ ನಡೆಸುತ್ತಿದ್ದರು. ಶನಿವಾರ ಮಗನಿಗೆ ಸೈಕಲ್ ಕೊಡಿಸುವುದಾಗಿ ನಂಬಿಸಿ ನರಸಿಂಹಲು ಶೋಭಾಳನ್ನು ಶಾಡ್ನಗರಕ್ಕೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಆದರೆ, ಭಾನುವಾರ ಬೆಳಿಗ್ಗೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶೋಭಾ ಹೆಣವಾಗಿ ಪತ್ತೆಯಾಗಿದ್ದಾರೆ.
ದುಷ್ಕರ್ಮಿಗಳು ಶೋಭಾ ಅವರ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ತಾಯಿ ಕೊಲೆಯಾದ ವಿಷಯ ತಿಳಿಯದ ಮಗು, ಇಡೀ ರಾತ್ರಿ ಕೊರೆಯುವ ಚಳಿಯಲ್ಲಿ ರಕ್ತದ ಮಡುವಿನಲ್ಲಿದ್ದ ತಾಯಿಯ ಶವದ ಮೇಲೆಯೇ ಕುಳಿತು ಅತ್ತಿದೆ. ಭಾನುವಾರ ಮುಂಜಾನೆ ಹೊಲಕ್ಕೆ ತೆರಳುತ್ತಿದ್ದ ರೈತರು ಮಗುವಿನ ಅಳು ಕೇಳಿ ಸ್ಥಳಕ್ಕೆ ಹೋದಾಗ, ಮಗು ತಾಯಿಯನ್ನು ಅಪ್ಪಿಕೊಂಡು ಅಳುತ್ತಿದ್ದ ದೃಶ್ಯ ಕಂಡು ಎಲ್ಲರ ಕಣ್ಣಾಲಿಗಳು ತೇವಗೊಂಡಿವೆ.
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಹಜೀವನ ನಡೆಸುತ್ತಿದ್ದ ನರಸಿಂಹಲು ಈ ಕೃತ್ಯ ಎಸಗಿರುವ ಶಂಕೆಯಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ನರಸಿಂಹಲು ಪತ್ತೆಗಾಗಿ ಬಲೆ ಬೀಸಿದ್ದಾರೆ.
“ಮಗುವಿನ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಸಾವನ್ನಪ್ಪಿದ್ದಾಳೆ ಎಂಬ ಅರಿವಿಲ್ಲದೆ ಮಗು ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು,” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಸ್ತುತ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಆರೋಪಿಯ ಬಂಧನದ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿಯಬೇಕಿದೆ.



