ಮೂಡುಬಿದ್ರೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ‘ಖಡಕ್’ ಅಧಿಕಾರಿ ಸಂದೇಶ್ ಪಿ.ಜಿ. : ಇವರ ವೃತ್ತಿ ಜೀವನಕ್ಕೆ ಕಳಂಕ ತರುವ ಹುನ್ನಾರ!

ದಕ್ಷತೆ ಮತ್ತು ಪ್ರಾಮಾಣಿಕ ಸೇವೆಗೆ ಹೆಸರಾದ, ಸಾರ್ವಜನಿಕ ವಲಯದಲ್ಲಿ ‘ಖಡಕ್ ಖಾಕಿ’ ಎಂದೇ ಚಿರಪರಿಚಿತರಾಗಿರುವ ಮೂಡುಬಿದ್ರೆ ಪೊಲೀಸ್ ವೃತ್ತ ನಿರೀಕ್ಷಕ (ಸಿಪಿಐ) ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಈ ದೂರಿನ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರವಿದೆಯೇ ಎಂಬ ಸಂಶಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಸಂದೇಶ್ ಪಿ.ಜಿ. ಅವರು ಈ ಹಿಂದೆ ಕಾರ್ಕಳ, ಬೆಳ್ತಂಗಡಿ ಹಾಗೂ ಬಜಪೆ ಸೇರಿದಂತೆ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಲಾಖೆಯಲ್ಲಿ ಮೆಚ್ಚುಗೆ ಪಾತ್ರರಾಗಿದ್ದ ಇವರು, ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಹೆಸರಾದವರು. ಇತ್ತೀಚೆಗೆ ಕಾರ್ಮೆಲ್ ಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಅರಿವು ಮೂಡಿಸುವ ‘ಸೇವಾ ಕಲಿಕಾ’ ಕಾರ್ಯಕ್ರಮ ನಡೆಸಿ, ಯುವ ಪೀಳಿಗೆಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಸ್ತುತ ಮಹಿಳೆಯೊಬ್ಬರು ಸಂದೇಶ್ ಪಿ.ಜಿ. ಹಾಗೂ ಎಸಿಪಿ ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿ ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ, ಈ ದೂರಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಏದ್ದಿವೆ:
ಘಟನೆ ನಡೆದು ಇಷ್ಟು ದಿನಗಳ ನಂತರ ದೂರು ನೀಡಿರುವುದರ ಹಿಂದಿನ ಮರ್ಮವೇನು?
ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆಯೇ?
ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಕ್ಕೆ ಪ್ರತಿಯಾಗಿ ಈ ಷಡ್ಯಂತ್ರ ರೂಪಿಸಲಾಗಿದೆಯೇ?
ಯಾವುದೇ ವ್ಯಕ್ತಿಯ ಮೇಲೆ ಆರೋಪ ಬಂದ ತಕ್ಷಣ ಅವರು ಅಪರಾಧಿಯಾಗುವುದಿಲ್ಲ. ಸಂದೇಶ್ ಅವರ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಆದ್ದರಿಂದ, ಈ ಪ್ರಕರಣವನ್ನು ಉನ್ನತ ಅಧಿಕಾರಿಗಳ ತಂಡವು ಶೀಘ್ರವಾಗಿ ತನಿಖೆ ನಡೆಸಿ ಸತ್ಯವನ್ನು ಹೊರಹಾಕಬೇಕಿದೆ. ದೂರು ನೀಡಿದ ಮಹಿಳೆಯ ಹಿಂದೆ ಯಾರ ಕೈವಾಡವಿದೆ ಮತ್ತು ಇಷ್ಟು ದಿನಗಳ ವಿಳಂಬಕ್ಕೆ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಕೆಲವು ಸಂಘಟನೆಗಳು ಒತ್ತಾಯಿಸಿವೆ.
ಆಧಾರರಹಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾರ ಪರ ಅಥವಾ ವಿರುದ್ಧವಾಗಿ ಸುಳ್ಳು ಸುದ್ದಿಗಳನ್ನು ಹರಡುವುದು ಕಾನೂನುಬಾಹಿರ. ತಪ್ಪು ಯಾರೇ ಮಾಡಿರಲಿ, ತನಿಖೆಯ ನಂತರ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗುವುದು ಖಚಿತ. ಅಲ್ಲಿಯವರೆಗೆ ಇಲಾಖೆಯ ಘನತೆಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.”
ಒಬ್ಬ ದಕ್ಷ ಅಧಿಕಾರಿಯ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರುವ ಉದ್ದೇಶದಿಂದ ಈ ದೂರು ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.



