ಕರುಳು ಕುಡಿ ನವಜಾತ ಶಿಶುವಿನ ಭೀಕರ ಹತ್ಯೆ: ಹೆತ್ತ ತಾಯಿ ಬಂಧನ

ತಿರುವನಂತಪುರಂ: ತನ್ನದೇ ನವಜಾತ ಶಿಶುವನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ 21 ವರ್ಷದ ತಾಯಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಆರ್ಯನ್‌ಕೋಡ್‌ನಲ್ಲಿ ನಡೆದಿದೆ. ಬಂಧಿತ ಮಹಿಳೆಯನ್ನು ಶಮ್ನಾ ಎಂದು ಗುರುತಿಸಲಾಗಿದ್ದು, ಸದ್ಯ ನ್ಯಾಯಾಲಯವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಏಪ್ರಿಲ್ 5ರ ಭಾನುವಾರದಂದು ಶಮ್ನಾ ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಮಗುವಿಗೆ ಜನ್ಮ ನೀಡಿದ್ದಳು. ತನಿಖಾಧಿಕಾರಿಗಳ ಮಾಹಿತಿಯಂತೆ, ಹೆರಿಗೆಯಾದ ತಕ್ಷಣವೇ ಆಕೆ ಮಗುವಿನ ಗಂಟಲನ್ನು ಬ್ಲೇಡ್‌ನಿಂದ ಸೀಳಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಕೃತ್ಯ ಎಸಗಿದ ನಂತರ ಸಾಕ್ಷ್ಯ ನಾಶಪಡಿಸಲು ಮಗುವಿನ ಮೃತದೇಹವನ್ನು ಬೆಡ್ ಶೀಟ್‌ನಲ್ಲಿ ಸುತ್ತಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಳು.
ಮಧ್ಯಾಹ್ನದ ವೇಳೆ ಪತಿ ಅಲ್ತಾಫ್ ಕೆಲಸದಿಂದ ಮನೆಗೆ ಮರಳಿದಾಗ, ಪತ್ನಿ ತೀವ್ರ ರಕ್ತಸ್ರಾವ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುವಾಗ, ಪತ್ನಿಯ ಪಾದರಕ್ಷೆ ತರಲು ರೂಮಿಗೆ ಹೋದ ಅಲ್ತಾಫ್‌ಗೆ ಹಾಸಿಗೆಯ ಅಡಿ ರಕ್ತದ ಕಲೆಗಳಿದ್ದ ಬಟ್ಟೆಯ ಬಂಡಲ್ ಪತ್ತೆಯಾಗಿದೆ. ಇದನ್ನು ಕಂಡು ಆತಂಕಗೊಂಡ ಅವರು ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಗು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆರಂಭದಲ್ಲಿ ಇದು ಹೆರಿಗೆಯ ಸಮಯದ ತುರ್ತು ಪರಿಸ್ಥಿತಿ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಬ್ಲೇಡ್‌ನಿಂದ ಸೀಳಿದ ಗಾಯಗಳು ಮತ್ತು ದೈಹಿಕ ಆಘಾತದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಹಿಳೆಯು ಎರಡನೇ ಮಗುವನ್ನು ಸಾಕಿ ಬೆಳೆಸುವ ಆರ್ಥಿಕ ಅಸಮರ್ಥತೆಯಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ವಿಶೇಷವೆಂದರೆ, ತನ್ನ ಪತ್ನಿ ಗರ್ಭಿಣಿಯಾಗಿದ್ದ ವಿಷಯವೇ ತನಗೆ ತಿಳಿದಿರಲಿಲ್ಲ ಎಂದು ಪತಿ ಅಲ್ತಾಫ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಶಮ್ನಾಳನ್ನು ವಶಕ್ಕೆ ಪಡೆದಿರುವ ಆರ್ಯನ್‌ಕೋಡ್ ಪೊಲೀಸರು, ಸ್ಥಳ ಮಹಜರು ಮತ್ತು ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



