ದಕ್ಷಿಣ ಕನ್ನಡ ಜೆಡಿಎಸ್ ಪುನಶ್ಚೇತನ: ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ನೇಮಕ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾದಳ (ಜಾತ್ಯಾತೀತ) ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮತ್ತು ಪುನರ್‌ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ನಾಯಕತ್ವ ಮಹತ್ವದ ನಿರ್ಧಾರ ಕೈಗೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ H.D. ಕುಮಾರಸ್ವಾಮಿ ಅವರ ಅನುಮೋದನೆಯೊಂದಿಗೆ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಮುಖಂಡ, ‘ತುಳುನಾಡ ಸಾರಥಿ’ ಖ್ಯಾತಿಯ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಘಟಕದ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರ ಶಿಫಾರಸಿನ ಮೇರೆಗೆ ಈ ನೇಮಕಾತಿ ನಡೆದಿದ್ದು, ಕಾರ್ಯಧ್ಯಕ್ಷರಾಗಿ ಶಶಿರಾಜ ಶೆಟ್ಟಿ ಕೊಳಂಬೆ ಆಯ್ಕೆಯಾಗಿದ್ದಾರೆ. ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ವಿ. ನಾಡಗೌಡ ಹಾಗೂ ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ ಅವರು ನೂತನ ಪದಾಧಿಕಾರಿಗಳಿಗೆ ಅಧಿಕೃತ ಪಟ್ಟಿಯನ್ನು ಹಸ್ತಾಂತರಿಸಿದರು.
ಪಕ್ಷದ ಬಲವರ್ಧನೆಗಾಗಿ ಸಮರ್ಥ ನಾಯಕರನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪ್ರಮುಖ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ:
ಅಧ್ಯಕ್ಷರು: ಜಾಕೆ ಮಾಧವ ಗೌಡ (ಪಂಜಿತ್ತಾಡಿ)
ಉಪಾಧ್ಯಕ್ಷರು: ಅಜೀಜ್ ಮಲಾರ್, ದಯಾಕರ್ ಆಳ್ವ, ಸಿ.ಪಿ. ಸೈಮನ್, ಅಜೀಜ್ ಕುದ್ರೋಳಿ.
ಕಾರ್ಯದರ್ಶಿಗಳು: ಮೋಹನ್‌ದಾಸ್ ಶೆಟ್ಟಿ, ಪುತ್ತು ಮೋನು ಹುಸೇನ್, ಪ್ರಿಯಾ ಸಾಲಿಯಾನ್, ಮುನೀರ್ ಮುಕ್ಕಚೇರಿ.
ಖಜಾಂಚಿ: ಗಂಗಾಧರ (ಉಳ್ಳಾಲ).
ಸಂಘಟನಾ ಕಾರ್ಯದರ್ಶಿಗಳು: ಧರ್ಮರಾಜ ಗೌಡ, ಎ.ಐ.ಸಿ. ಕೈಲಾಶ್ ಕೆದಂಬಾಡಿ, ಸುಮತಿ ಹೆಗ್ಡೆ, ಉಸ್ಮಾನಕ್ಕ, ಸುಮಿತ್ ಸುವರ್ಣ, ವೆಂಕಟೇಶ್ ತಡಂಬೈಲ್.
1997 ರಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಯೋಗಿಶ್ ಶೆಟ್ಟಿ ಅವರು ವಿದ್ಯಾರ್ಥಿ ಜನತಾದಳದಿಂದ ಯುವ ಜನತಾದಳದವರೆಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಆಗಿ ಜನಸಾಮಾನ್ಯರ ಧ್ವನಿಯಾಗಿದ್ದ ಅವರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಸತತ 62 ದಿನಗಳ ಕಾಲ ಅನ್ನದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ಈ ಸಾಮಾಜಿಕ ಸೇವೆಯನ್ನು ಗುರುತಿಸಿ ಜನರು ಅವರನ್ನು ಪ್ರೀತಿಯಿಂದ ‘ತುಳುನಾಡ ಸಾರಥಿ’ ಎಂದು ಕರೆಯುತ್ತಾರೆ.
ಈ ನೂತನ ನೇಮಕಾತಿಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೆಡಿಎಸ್ ನೆಲೆಯನ್ನು ಗಟ್ಟಿಗೊಳಿಸುವ ಮೈಲಿಗಲ್ಲಾಗಲಿದೆ. “ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಸಂಘಟನೆಯನ್ನು ಚುರುಕುಗೊಳಿಸುವುದು, ಯುವಕರನ್ನು ಪಕ್ಷಕ್ಕೆ ಆಕರ್ಷಿಸುವುದು ಮತ್ತು ಜನಪರ ಹೋರಾಟಗಳ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಪ್ರಮುಖ ಆದ್ಯತೆ,” ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಸುಕುಮಾರ್ ಕೋಡ್ತುಗೊಳಿ, ರಾಕೇಶ್ ಕುಂಟಿಕಾನ ಹಾಗೂ ಜಿಲ್ಲಾ ವಿದ್ಯಾರ್ಥಿ ಜನತಾದಳ ಅಧ್ಯಕ್ಷ ನಿಹಾಲ್ ಎಸ್. ಕೋಡ್ತುಗುಳಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.









