ಅತ್ತಿಬೆಲೆ ಟೋಲ್ ಬಳಿ ತಮಿಳು ಗೂಂಡಾಗಳ ಅಟ್ಟಹಾಸ: ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ

ಆನೇಕಲ್: ತಮಿಳುನಾಡಿನ ಕೃಷ್ಣಗಿರಿಯಿಂದ ಹಿಂದಿರುಗುತ್ತಿದ್ದ ಕನ್ನಡಿಗರ ಟೆಂಪೋ ಟ್ರಾವೆಲರ್ (ಟಿಟಿ) ವಾಹನವನ್ನು ಬೆನ್ನಟ್ಟಿಕೊಂಡು ಬಂದ ಕಿಡಿಗೇಡಿಗಳು, ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಪ್ರವಾಸಿಗರನ್ನು ಹೊತ್ತು ಟಿಟಿ ವಾಹನವು ತಮಿಳುನಾಡಿನ ಕೃಷ್ಣಗಿರಿಗೆ ತೆರಳಿತ್ತು. ಈ ವೇಳೆ ಅಲ್ಲಿನ ಸ್ಥಳೀಯ ತಮಿಳು ಭಾಷಿಕರ ಗುಂಪೊಂದು ಕನ್ನಡಿಗರೊಂದಿಗೆ ಗಲಾಟೆ ತೆಗೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಚಾಲಕ ರಾಮಕೃಷ್ಣ ಮತ್ತು ಪ್ರವಾಸಿಗರು ತಕ್ಷಣ ಅಲ್ಲಿಂದ ವಾಹನ ಚಲಾಯಿಸಿಕೊಂಡು ಕರ್ನಾಟಕದ ಗಡಿಯತ್ತ ಧಾವಿಸಿದ್ದಾರೆ.
ಕೃಷ್ಣಗಿರಿಯಿಂದಲೇ ದೊಣ್ಣೆ ಮತ್ತು ಮಾರಕಾಸ್ತ್ರಗಳೊಂದಿಗೆ ಟಿಟಿ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಗೂಂಡಾಗಳು, ಅತ್ತಿಬೆಲೆ ಟೋಲ್ ಬಳಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎನ್ನುವುದನ್ನೂ ನೋಡದೆ, ತಮಿಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ವಾಹನದ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಈ ವೇಳೆ ತಡೆಯಲು ಬಂದ ಚಾಲಕ ರಾಮಕೃಷ್ಣ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದ ಈ ಅಟ್ಟಹಾಸದಿಂದ ಪ್ರಯಾಣಿಕರು ತೀವ್ರವಾಗಿ ಗಾಬರಿಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ಗೂಂಡಾಗಿರಿ ನಡೆಸಿದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ನಡೆದ ಈ ಹಲ್ಲೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.



