Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ನಕಲಿ ಬಂಗಾರ ನೀಡಿ ವಂಚನೆ: ಓರ್ವ ಮಹಿಳಾ ಆರೋಪಿಯ ಬಂಧನ, ಸ್ವತ್ತು ವಶ

Share News

ಪಡುಬಿದ್ರಿ: ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಸರ ನೀಡಿ ಅಸಲಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪಡುಬಿದ್ರಿ ಪೊಲೀಸರು, ಕಾರ್ಯಾಚರಣೆ ನಡೆಸಿ ಓರ್ವ ಮಹಿಳಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಜನವರಿ 13ರಂದು ಮಧ್ಯಾಹ್ನ 2:30ರ ಸುಮಾರಿಗೆ ನಡ್ಸಾಲು ಗ್ರಾಮದ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ಹೆಂಗಸು ಮತ್ತು ಗಂಡಸು ಇವರನ್ನು ತಡೆದಿದ್ದರು. ತಮ್ಮ ಬಳಿ 6 ಪವನ್ ತೂಕದ 9 ಲಕ್ಷ್ಮಿ ಪೆಂಡೆಂಟ್ ಇರುವ ಚಿನ್ನದ ಸರವಿದೆ ಎಂದು ನಂಬಿಸಿ, ತುರ್ತು ಹಣದ ಅವಶ್ಯಕತೆ ಇರುವುದಾಗಿ ಹೇಳಿದ್ದರು. ಆ ನಕಲಿ ಸರವನ್ನು ಬಸ್ಸಮ್ಮ ಅವರಿಗೆ ನೀಡಿ, ಅವರಿಂದ 1.50 ಲಕ್ಷ ರೂ. ಮೌಲ್ಯದ 2 ಪವನ್ ಬಂಗಾರ ಹಾಗೂ 6,000 ರೂ. ನಗದು ಪಡೆದು ಪರಾರಿಯಾಗಿದ್ದರು.

ಬಳಿಕ ಬಸ್ಸಮ್ಮ ಅವರು ಆ ಸರವನ್ನು ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅದು ನಕಲಿ ಎಂದು ತಿಳಿದುಬಂದಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ಪಡುಬಿದ್ರಿ ಪಿಎಸ್‌ಐಗಳಾದ ಶಕ್ತಿವೇಲು ಇ. ಮತ್ತು ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದ ತಂಡವು ಆರೋಪಿಗಳ ಮಾಹಿತಿ ಸಂಗ್ರಹಿಸಿತ್ತು.

ದಿನಾಂಕ 23/03/2026 ರಂದು ತುಮಕೂರು ಜಿಲ್ಲೆಯ ಬೆಳ್ಳಾವಿ ನಿವಾಸಿ ಕಾವ್ಯ ಎಂಬಾಕೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ 75,000 ರೂ. ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ 6,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ದಾವಣಗೆರೆಯ ವೆಂಕಟೇಶ್ ಎಂಬಾತನಿಗಾಗಿ ಶೋಧ ಮುಂದುವರಿದಿದೆ.

ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಜೇಶ್ ಪಿ., ಗಿರೀಶ್ ಯು.ಆರ್., ಹೆಚ್‌ಸಿ ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ, ಮಹಿಳಾ ಪಿಸಿಗಳಾದ ರುಕ್ಮಿಣಿ, ಜ್ಯೋತಿ ಹಾಗೂ ಡಿಪಿಯೋ ತಾಂತ್ರಿಕ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಭಾಗವಹಿಸಿದ್ದರು. ಹಿರಿಯ ಅಧಿಕಾರಿಗಳಾದ ಸುಧಾಕರ ಎಸ್. ನಾಯಕ್, ಎಸ್. ವಿಜಯಪ್ರಸಾದ್ ಹಾಗೂ ಅಜ್ಮತ್ ಆಲಿ ಅವರು ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!