ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಈಜಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ 8ನೇ ತರಗತಿ ಬಾಲಕ ಸಾವು

Share News

ಮಳವಳ್ಳಿ: ಈಜಲೆಂದು ಹೋದ ಬಾಲಕನೊಬ್ಬ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂದೀಪುರ ಗ್ರಾಮದಲ್ಲಿ ಸಂಭವಿಸಿದೆ.

ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದ ನಿವಾಸಿ ಶಿವಣ್ಣ ಎಂಬುವವರ ಪುತ್ರ ಪೃಥ್ವಿನ್ (15) ಮೃತಪಟ್ಟ ದುರ್ದೈವಿ. ಈತ ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಮಧ್ಯಾಹ್ನ ಸುಮಾರು 4 ಮಂದಿ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ಎಂದು ತಿಳಿದುಬಂದಿದೆ.

ಭಾನುವಾರ ಸಂಜೆಯಾದರೂ ಬಾಲಕ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಶೋಧ ನಡೆಸಿದ್ದಾರೆ. ಸ್ನೇಹಿತರ ವಿಚಾರಿಸಿದಾಗ ಆತ ಕೃಷಿ ಹೊಂಡಕ್ಕೆ ಇಳಿದಿದ್ದ ವಿಷಯ ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ನಂದೀಪುರ ಗ್ರಾಮದ ರಾಜೇಗೌಡ ಎಂಬುವವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಬಾಲಕನ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.

ಈ ಕುರಿತು ಮಾಹಿತಿ ಪಡೆದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಾಲಕನ ಅಕಾಲಿಕ ಮರಣದಿಂದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಕೃಷಿ ಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಇಂತಹ ಅವಘಡಗಳು ಮರುಕಳಿಸುತ್ತವೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!