Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಮಂಗಳೂರು: ಆಟೋ ರಿಕ್ಷಾದಲ್ಲಿ ಎಂಡಿಎಂಎ ಮಾರಾಟ; ಸಿಸಿಬಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

Share News

ಮಂಗಳೂರು: ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ತೊಕ್ಕೊಟ್ಟು ನಿವಾಸಿಗಳಾದ ಹೈದರ್ ಅಲಿಯಾಸ್ ಹೈದರ್ ಅಲಿ (53), ಮೊಹಮ್ಮದ್ ಸಜಾದ್ (29) ಮತ್ತು ಪಂಪ್‌ವೆಲ್ ನಿವಾಸಿ ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ. ಈ ಪೈಕಿ ಹೈದರ್ ಅಲಿ ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದು, ಆತನ ವಿರುದ್ಧ ಈ ಹಿಂದೆ ಮಾದಕ ವಸ್ತು ಮಾರಾಟ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಪಂಪ್‌ವೆಲ್ ಹಾಗೂ ಎಕ್ಕೂರು ಪರಿಸರದಲ್ಲಿ ಆಟೋ ರಿಕ್ಷಾವೊಂದರಲ್ಲಿ ಮಾದಕ ವಸ್ತುವನ್ನು ತಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರಿಂದ ಒಟ್ಟು 4,37,500 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿವರ ಈ ಕೆಳಗಿನಂತಿದೆ:

ಮಾದಕ ವಸ್ತು: 26 ಗ್ರಾಂ ತೂಕದ ಎಂಡಿಎಂಎ (MDMA).

ನಗದು: 37,000 ರೂಪಾಯಿ.

ವಾಹನ: ಕೃತ್ಯಕ್ಕೆ ಬಳಸಿದ್ದ KA-19-AC-2245 ಸಂಖ್ಯೆಯ ಆಟೋ ರಿಕ್ಷಾ.

ಇತರೆ: 5 ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ತೂಕ ಮಾಪನ ಯಂತ್ರ.

ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ವಸ್ತು ಮುಕ್ತ ಮಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಪೊಲೀಸರು ಈ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!