ಬೀದರ್: ಬಿಸಿಲಿನ ಝಳಕ್ಕೆ ಕುಸಿದು ಬಿದ್ದು ಯುವಕ ಸಾವು; ನಾಲ್ಕು ದಿನದ ಬಳಿಕ ಶವ ಪತ್ತೆ

ಕಮಲನಗರ: ಜಿಲ್ಲೆಯಲ್ಲಿ ಸತತವಾಗಿ ಏರುತ್ತಿರುವ ಬಿಸಿಲಿನ ತಾಪಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಕಮಲನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಸಮೀಪ ನಡೆದಿದೆ.
ಘಟನೆಯ ವಿವರ:
ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ (20) ಮೃತಪಟ್ಟ ಯುವಕ. ಈತ ಕಳೆದ ಏಪ್ರಿಲ್ 14ರಂದು ತರಕಾರಿ ತರಲೆಂದು ಮಾರುಕಟ್ಟೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದನು. ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ಬೆನ್ನಲ್ಲೇ, ನಿನ್ನೆ ಯುವಕನ ಶವ ಪತ್ತೆಯಾಗುವ ಮೂಲಕ ಘಟನೆ ಬೆಳಕಿಗೆ ಬಂದಿದೆ.
ಸಮೀರ್ ಡಿಗ್ಗಿ ಗ್ರಾಮದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಬಿಸಿಲಿನ ತೀವ್ರತೆಗೆ ಸುಸ್ತಾಗಿದ್ದಾನೆ. ದಾರಿಯಲ್ಲಿ ತನಗೆ ತಲೆ ಸುತ್ತು ಬರುತ್ತಿದೆ ಎಂದು ಅರಿತ ಯುವಕ, ರಸ್ತೆ ಬದಿಯಲ್ಲಿದ್ದ ಮೆಕಾನಿಕಲ್ ಅಂಗಡಿಯೊಂದರಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದನು. ಬಳಿಕ ಸ್ವಲ್ಪ ಚೇತರಿಸಿಕೊಂಡಂತೆ ಕಂಡುಬಂದು ಮತ್ತೆ ಪ್ರಯಾಣ ಮುಂದುವರಿಸಿದ್ದಾನೆ. ಆದರೆ, ಅತಿಯಾದ ಉಷ್ಣಾಂಶ ಹಾಗೂ ಬಿಸಿಲಿನ ಝಳ ತಾಳಲಾರದೆ ರಸ್ತೆಯಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಬೀದರ್ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಸಿಲ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಮಧ್ಯಾಹ್ನದ ಸಮಯದಲ್ಲಿ ಅನಿವಾರ್ಯ ಕೆಲಸಗಳಿದ್ದರೆ ಹೊರತುಪಡಿಸಿ, ಜನರು ಮನೆಯಿಂದ ಹೊರಬರದಂತೆ ಮತ್ತು ಅತಿಯಾದ ದ್ರವಾಹಾರ ಸೇವಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




