ಜೆಜೆಎಂ ಹಗರಣ: “ತೆಲಗಿಯನ್ನೂ ಮೀರಿದ ಸ್ಟಾಂಪ್ ಪೇಪರ್ ಜಾಲ” – ಸಿಬಿಐ ತನಿಖೆಗೆ ಡಿ.ಎನ್. ಜೀವರಾಜ್ ಆಗ್ರಹ

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ (JJM) ಯೋಜನೆ ‘ಜಲಜೀವನ್ ಕಮಿಷನ್’ ಆಗಿ ಬದಲಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣದಲ್ಲಿ ನಕಲಿ ಸ್ಟಾಂಪ್ ಪೇಪರ್ ಬಳಕೆ ಹಾಗೂ ಕ್ರಿಮಿನಲ್ ಚಟುವಟಿಕೆಗಳು ನಡೆದಿರುವುದರಿಂದ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
1. ಇ-ಸ್ಟಾಂಪಿಂಗ್ ಜಾಲ ಮತ್ತು ನಕಲಿ ಒಪ್ಪಂದ:
ತೆಲಗಿ ಮಾದರಿ ಹಗರಣ: ಹಿಂದೆ ಕರೀಂಲಾಲ್ ತೆಲಗಿ ನಡೆಸಿದ್ದ ಸ್ಟಾಂಪ್ ಪೇಪರ್ ಹಗರಣಕ್ಕಿಂತಲೂ ಭೀಕರವಾದ ಜಾಲ ಇದಾಗಿದೆ. ಒಂದೇ ಕ್ಯೂಆರ್ ಕೋಡ್ ಮತ್ತು ಒಂದೇ ಸರಣಿ ಸಂಖ್ಯೆಯ ಸ್ಟಾಂಪ್ ಪೇಪರ್ಗಳನ್ನು ಬಳಸಿ ಹಲವು ಒಪ್ಪಂದಗಳನ್ನು ಸೃಷ್ಟಿಸಲಾಗಿದೆ.
ದಾಖಲೆಗಳ ಪ್ರದರ್ಶನ: ಎನ್.ಆರ್. ಪುರ ಮತ್ತು ಕೊಪ್ಪ ತಾಲ್ಲೂಕಿನಲ್ಲಿ ಒಂದೇ ದಿನ, ಒಂದೇ ಸಮಯಕ್ಕೆ ಪಡೆದಂತೆ ಕಾಣುವ ಸ್ಟಾಂಪ್ ಪೇಪರ್ಗಳ ಮೂಲಕ ಅನೇಕ ಕಾಮಗಾರಿಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ಕ್ಯಾನ್ ಮಾಡಿದರೆ ಇವು ಅಸಲಿ ಅಲ್ಲ ಎಂಬ ಮಾಹಿತಿ ಬರುತ್ತಿದೆ ಎಂದು ಅವರು ದಾಖಲೆಗಳನ್ನು ತೋರಿಸಿದರು.
ಈ ಬೃಹತ್ ಅವ್ಯವಹಾರವು ಶೃಂಗೇರಿ ಶಾಸಕರ ‘ಕೃಪಾಶೀರ್ವಾದ’ದಿಂದಲೇ ನಡೆಯುತ್ತಿದೆ. ಶಾಸಕರ ಆಪ್ತರು ಹಾಗೂ ಬೆಂಬಲಿಗರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಜೀವರಾಜ್ ದೂರಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯ ಅಡಿಯಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಲೂಟಿ ನಡೆಯುತ್ತಿರುವುದು ಆಘಾತಕಾರಿ ಎಂದರು.
ಇಲ್ಲದ’ ಬೋರ್ವೆಲ್ಗಳಿಗೆ ಲಕ್ಷಾಂತರ ರೂ. ಬಿಲ್!
ಕಾಮಗಾರಿಗಳ ವಾಸ್ತವ ಸ್ಥಿತಿಯನ್ನು ತಿಳಿಯಲು ಜೀವರಾಜ್ ಅವರು ಸ್ವಂತ ಖರ್ಚಿನಲ್ಲಿ ಕ್ಯಾಮರಾ ಮೂಲಕ ಪರಿಶೀಲನೆ ನಡೆಸಿದ್ದು, ಅದರಲ್ಲಿ ಕಂಡುಬಂದ ಆಘಾತಕಾರಿ ಸತ್ಯಗಳೆಂದರೆ:
ಆಳದಲ್ಲಿ ವಂಚನೆ: ಕೇವಲ 228 ಅಡಿ ಆಳವಿರುವ ಕೊಳವೆಬಾವಿಗೆ 587 ಅಡಿ ಎಂದು ತೋರಿಸಿ ಹಣ ಲೂಟಿ ಮಾಡಲಾಗಿದೆ.
ಅಸ್ತಿತ್ವದಲ್ಲೇ ಇಲ್ಲದ ಬೋರ್ವೆಲ್: ಬಲಗಾರು ಪಂಚಾಯಿತಿ ಮತ್ತು ಗೌರಿಹಳ್ಳದಲ್ಲಿ ಬೋರ್ವೆಲ್ ಕೊರೆಯದೆಯೇ ಲಕ್ಷಾಂತರ ರೂಪಾಯಿಗಳ ಬಿಲ್ ಪಾವತಿ ಮಾಡಲಾಗಿದೆ.
ಗುಣಮಟ್ಟದ ಕೊರತೆ: ಪೈಪ್ ಅಳವಡಿಕೆ ಮತ್ತು ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲೂ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ.
ವಿಶೇಷವೆಂದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ. ಸತೀಶ್ ಅವರೇ ಕೆಡಿಪಿ ಸಭೆ ಹಾಗೂ ಸಾರ್ವಜನಿಕವಾಗಿ ಜೆಜೆಎಂ ಯೋಜನೆಯಲ್ಲಿ ದೊಡ್ಡ ಮಟ್ಟದ ಮೋಸ ನಡೆಯುತ್ತಿದೆ ಎಂದು ಈ ಹಿಂದೆ ಧ್ವನಿ ಎತ್ತಿದ್ದರು. ಇದನ್ನು ಜೀವರಾಜ್ ಪತ್ರಿಕಾ ತುಣುಕಿನ ಮೂಲಕ ನೆನಪಿಸಿದರು.
ಡಿ.ಎನ್. ಜೀವರಾಜ್ ಅವರ ಎಚ್ಚರಿಕೆ: “ಸ್ಥಳೀಯ ಮಟ್ಟದಲ್ಲಿ ತನಿಖೆ ನಡೆದರೆ ಪ್ರಭಾವಿಗಳು ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ. ಕೇಂದ್ರದ 150 ಕೋಟಿ ರೂ. ಹಣ ಖರ್ಚಾದರೂ ಒಂದೇ ಒಂದು ಮನೆಗೆ ನೀರು ತಲುಪಿಲ್ಲ. ಈ ವ್ಯವಸ್ಥಿತ ಲೂಟಿಯ ಸತ್ಯಾಸತ್ಯತೆ ಹೊರಬರಲು ಕೇಂದ್ರ ತನಿಖಾ ಸಂಸ್ಥೆಯೇ ಬರಬೇಕು.”
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಮುಖಂಡ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.



