ಖ್ಯಾತ ನಟಿ ಅನನ್ಯಾ ರಾಜ್ ನಿಧನ: 1 ತಿಂಗಳ ಬಳಿಕ ದುಃಖದ ಸುದ್ದಿ ಹೊರಹಾಕಿದ ಕುಟುಂಬ!

ಚಿತ್ರರಂಗದಲ್ಲಿ ಸಾಲು ಸಾಲು ಆಘಾತಕಾರಿ ಘಟನೆಗಳು ಸಂಭವಿಸುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ಉದಯೋನ್ಮುಖ ನಟಿ ಅನನ್ಯಾ ರಾಜ್ (27) ಇಹಲೋಕ ತ್ಯಜಿಸಿದ ದುಃಖದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಅನನ್ಯಾ ರಾಜ್, ಕಳೆದ ತಿಂಗಳು 15 ರಂದೇ ನಿದ್ರೆಯಲ್ಲಿದ್ದಾಗ ಕೊನೆಯುಸಿರೆಳೆದಿದ್ದರು. ಆದರೆ ಈ ದುರಂತದ ಸುದ್ದಿಯನ್ನು ಅವರ ಕುಟುಂಬಸ್ಥರು ಒಂದು ತಿಂಗಳ ಬಳಿಕ ಅಧಿಕೃತವಾಗಿ ಘೋಷಿಸಿದ್ದಾರೆ.
ಮಾದರಿ ಲೋಕದಿಂದ ಬೆಳ್ಳಿಪರದೆಯವರೆಗೆ:
18ನೇ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ್ದ ಅನನ್ಯಾ, ಲ್ಯಾಕ್ಮೆ, ಕೋಕಾ-ಕೋಲಾ, ಲಕ್ಸ್, ಸ್ಯಾಮ್ಸಂಗ್, ಅಮೆಜಾನ್ ಸೇರಿದಂತೆ ಪ್ರಮುಖ ಬ್ರ್ಯಾಂಡ್ಗಳ ಜಾಹೀರಾತುಗಳಲ್ಲಿ ಮಿಂಚಿದ್ದರು. ಬಳಿಕ ‘7 ಅವರ್ಸ್ ಟು ಗೋ’, ‘ದಿ ಫೈನಲ್ ಎಕ್ಸಿಟ್’, ‘ಘೋಸ್ಟ್’ ಮುಂತಾದ ಹಿಂದಿ ಚಿತ್ರಗಳಲ್ಲಿ ಹಾಗೂ ತೆಲುಗಿನ ‘ತಗ್ಗೆದೇ ಲೇ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
ದೈಹಿಕ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು:
ಅನನ್ಯಾ ಕಳೆದ ಕೆಲವು ಸಮಯದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಿಂದ ಹೊರಬರಲು ಹೋರಾಡುತ್ತಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ಅವರು ಅಭಿಮಾನಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.
ಆದರೆ, ನಟಿ ನಿಧನರಾಗಿ ಒಂದು ತಿಂಗಳ ನಂತರ ಈ ವಿಷಯವನ್ನು ಪ್ರಕಟಿಸಿದ್ದು ಏಕೆ ಎಂಬ ಬಗ್ಗೆ ಈಗ ಚಿತ್ರರಂಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.



