ರಾಷ್ಟ್ರೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕಡಪ: ರಸ್ತೆಯಲ್ಲಿ ಹರಿಯಿತು ತುಪ್ಪದ ಹೊಳೆ! ತಿರುಪತಿ ಲಡ್ಡುವಿನ ತುಪ್ಪಕ್ಕಾಗಿ ಜನಜಂಗುಳಿ

Share News

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಿತ್ರಾವತಿ ಸೇತುವೆಯ ಬಳಿ ಇಂದು ವಿಚಿತ್ರ ಮತ್ತು ಅಚ್ಚರಿಯ ದೃಶ್ಯವೊಂದು ಕಂಡುಬಂದಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆಂದು ಸಾಗಿಸಲಾಗುತ್ತಿದ್ದ ಸಾವಿರಾರು ಲೀಟರ್ ತುಪ್ಪ, ರಸ್ತೆಯ ಪಾಲಾದ ಬೆನ್ನಲ್ಲೇ ಜನರ ಪಾಲಾಗಿದೆ!

ಸುಮಾರು 21,000 ಲೀಟರ್ ಶುದ್ಧ ತುಪ್ಪವನ್ನು ಹೊತ್ತು ಸಾಗುತ್ತಿದ್ದ ಬೃಹತ್ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಕೊಂಡಾಪುರಂ ಮಂಡಲದ ಬಳಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಟ್ಯಾಂಕರ್‌ನಿಂದ ತುಪ್ಪವು ರಸ್ತೆಯ ಉದ್ದಕ್ಕೂ ನದಿಯಂತೆ ಹರಿಯಲು ಆರಂಭಿಸಿತು.

ರಸ್ತೆಯಲ್ಲಿ ಹರಿಯುತ್ತಿರುವುದು ಸಾಮಾನ್ಯ ನೀರಲ್ಲ, ಸಾಕ್ಷಾತ್ ತಿರುಪತಿ ಲಡ್ಡುವಿಗೆ ಬಳಸುವ ‘ಶುದ್ಧ ತುಪ್ಪ’ ಎಂದು ತಿಳಿಯುತ್ತಿದ್ದಂತೆಯೇ ಸ್ಥಳೀಯರ ಸಡಗರಕ್ಕೆ ಪಾರವೇ ಇಲ್ಲದಂತಾಯಿತು.

ಮನೆಯಲ್ಲಿದ್ದ ಬಕೆಟ್, ಪ್ಲಾಸ್ಟಿಕ್ ಬಾಟಲಿ, ಹಂಡೆ ಹಾಗೂ ದೊಡ್ಡ ಡ್ರಮ್‌ಗಳನ್ನು ಹಿಡಿದು ಜನ ಸ್ಥಳಕ್ಕೆ ದೌಡಾಯಿಸಿದರು.

ಕೆಲವರಂತೂ ದ್ವಿಚಕ್ರ ವಾಹನಗಳಲ್ಲಿ ಬಂದು ದೊಡ್ಡ ದೊಡ್ಡ ಕ್ಯಾನ್‌ಗಳಲ್ಲಿ ತುಪ್ಪ ತುಂಬಿಸಿಕೊಂಡು ಹೋದರು.

ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಟ್ಯಾಂಕರ್ ಬಹುತೇಕ ಖಾಲಿಯಾಗಿತ್ತು!

ಟ್ಯಾಂಕರ್‌ನಲ್ಲಿದ್ದ ಒಟ್ಟು 21,000 ಲೀಟರ್ ತುಪ್ಪದಲ್ಲಿ, ಅಧಿಕಾರಿಗಳು ಬರುವ ಹೊತ್ತಿಗೆ ಉಳಿದಿದ್ದು ಕೇವಲ 500 ಲೀಟರ್ ಮಾತ್ರ. ಅಂದರೆ ಅಲ್ಪ ಸಮಯದಲ್ಲಿ ಸುಮಾರು 20,500 ಲೀಟರ್ ತುಪ್ಪ ಜನರ ಮನೆ ಸೇರಿದೆ!

ದೇವರಿಗಿಂತ ಭಕ್ತರೇ ಮೊದಲು ಪ್ರಸಾದ ಸ್ವೀಕರಿಸಿದರು” ಎಂದು ನೆಟ್ಟಿಗರು ಈ ವಿಡಿಯೋ ನೋಡಿ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅತ್ತ ಅಪಘಾತದ ಆತಂಕವಿದ್ದರೆ, ಇತ್ತ ಉಚಿತವಾಗಿ ಸಿಕ್ಕ ತುಪ್ಪದ ಸಂಭ್ರಮದಲ್ಲಿ ಜನ ಮುಳುಗಿದ್ದರು.

ವರದಿ :- ಆಂಟೋನಿ ಪತ್ರಕರ್ತ


Share News

Leave a Reply

Your email address will not be published. Required fields are marked *

Back to top button
error: Content is protected !!