ಕ್ರೌರ್ಯದ ಪರಮಾವಧಿ: ಪತ್ನಿ ನೇಣು ಹಾಕಿಕೊಳ್ಳುತ್ತಿದ್ದರೂ ತಡೆಯದೆ ವಿಡಿಯೋ ಚಿತ್ರೀಕರಿಸಿದ ಪತಿ!

ಅಮರಾವತಿ/ಕಡಪ: ಕ್ಷಣಿಕ ಕೋಪ ಮತ್ತು ಪತಿಯ ಅಮಾನವೀಯ ನಿರ್ಲಕ್ಷ್ಯಕ್ಕೆ ಅಮಾಯಕ ಮಹಿಳೆಯೊಬ್ಬಳು ಬಲಿಯಾಗಿರುವ ಬೆಚ್ಚಿಬೀಳಿಸುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಸಾವಿನ ಅಂಚಿನಲ್ಲಿದ್ದರೂ ಆಕೆಯನ್ನು ರಕ್ಷಿಸುವ ಬದಲು ಪತಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಮಹಿಳೆಯನ್ನು ಕೃಷ್ಣವೇಣಿ ಎಂದು ಗುರುತಿಸಲಾಗಿದೆ. ಈಕೆಯ ಪತಿ ಶ್ರೀರಾಮ್ ಶ್ರೀನಿವಾಸ್ ವೃತ್ತಿಯಲ್ಲಿ ಲೋಕೋ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರದಂದು ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಈ ಜಗಳ ವಿಕೋಪಕ್ಕೆ ಹೋದಾಗ ಕೃಷ್ಣವೇಣಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಪತ್ನಿ ನೇಣಿನ ಕುಣಿಕೆಗೆ ತಲೆ ಹಾಕುತ್ತಿದ್ದರೂ ಪತಿ ಶ್ರೀರಾಮ್ ಆಕೆಯನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಬದಲಾಗಿ, “ನೀನು ಕೇವಲ ತಮಾಷೆ ಮಾಡುತ್ತಿದ್ದೀಯಾ, ಹೆದರಿಸುತ್ತಿದ್ದೀಯಾ” ಎಂದು ಭಾವಿಸಿ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೆ, “ನೇಣು ಹಾಗೆ ಹಾಕಿಕೊಳ್ಳಬಾರದು, ಹೀಗೆ ಮಾಡಬೇಕು” ಎಂದು ಕ್ರೂರವಾಗಿ ಸೂಚನೆ ನೀಡುತ್ತಾ ಮೂಕಪ್ರೇಕ್ಷಕನಂತೆ ನಿಂತಿದ್ದ ಎನ್ನಲಾಗಿದೆ.
ಪತ್ನಿ ನಿಜವಾಗಿಯೂ ಪ್ರಾಣ ಬಿಡುತ್ತಿದ್ದಾಳೆ, ಆಕೆಯ ಒದ್ದಾಟ ಹೆಚ್ಚಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ತಕ್ಷಣ ಆಕೆಯನ್ನು ಕೆಳಗಿಳಿಸಿದರೂ ಕೃಷ್ಣವೇಣಿ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು. ತಮಾಷೆಗಾಗಿ ಅಥವಾ ಅಹಂಕಾರಕ್ಕಾಗಿ ಮಾಡಿದ ಒಂದು ನಿರ್ಲಕ್ಷ್ಯ ಇಂದು ಒಂದು ತುಂಬು ಜೀವವನ್ನೇ ಬಲಿಪಡೆದಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪತಿ ಶ್ರೀರಾಮ್ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ವಿಡಿಯೋ ತುಣುಕುಗಳು ಘಟನೆಗೆ ಪ್ರಮುಖ ಸಾಕ್ಷ್ಯವಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದು ಚಿಕ್ಕ ಜಗಳ ಮತ್ತು ಸಂವೇದನಾಶೂನ್ಯ ವರ್ತನೆ ಹೇಗೆ ಒಂದು ಸಂಸಾರವನ್ನು ಬೀದಿಗೆ ತರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.



