ಶಿರಸಿ ಮಡಗಾಂವಕರ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕಾರವಾರ: ಕಸ ಗುಡಿಸುವ ವಿಚಾರದಲ್ಲಿ ನಡೆದ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿರಸಿಯ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಹತ್ಯೆ ಎಸಗಿದ ಆರೋಪಿ ರಮೇಶ ಮಡಗಾಂವಕರನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶ ಕಿರಣ ಕಿಣಿ ಅವರು ಆದೇಶ ಹೊರಡಿಸಿದ್ದಾರೆ.
೨೦೧೫ರಲ್ಲಿ ಶಿರಸಿ ನಗರದಲ್ಲಿ ಈ ಘಟನೆ ನಡೆದಿತ್ತು. ಕಸ ಗುಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಂಗನಾಥ ಮಡಗಾಂವಕರ ಹಾಗೂ ರಮೇಶ ಮಡಗಾಂವಕರ ನಡುವೆ ಆಸ್ತಿ ವಿಚಾರದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಜಗಳ ನಡೆದಿತ್ತು. ಈ ವೇಳೆ ಉದ್ವಿಗ್ನಗೊಂಡ ರಮೇಶ, ರಂಗನಾಥ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ರಂಗನಾಥ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದರು.
ದೀರ್ಘಕಾಲದ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ರಮೇಶ ಮಡಗಾಂವಕರ ದೋಷಿ ಎಂದು ತೀರ್ಮಾನಿಸಿದೆ. ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ೨೫,೦೦೦ ರೂಪಾಯಿ ದಂಡ ವಿಧಿಸಲಾಗಿದೆ. ಪ್ರಕರಣದ ಎರಡನೇ ಆರೋಪಿಯಾದ ಸಾವಿತ್ರಿ ಮಡಗಾಂವಕರ ಅವರಿಗೆ ೨,೦೦೦ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಕಾನೂನು ಹೋರಾಟದಲ್ಲಿ ಮೃತ ರಂಗನಾಥ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿರುವ ನ್ಯಾಯಾಲಯವು, ದಂಡದ ಮೊತ್ತದ ಜೊತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವನ್ನು ಪಡೆಯಲು ಸಂತ್ರಸ್ತ ಕುಟುಂಬಕ್ಕೆ ಸೂಚಿಸಿದೆ. ಸಣ್ಣ ಕಾರಣಕ್ಕೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯಗೊಂಡು, ಇದೀಗ ಆರೋಪಿಗೆ ಕಠಿಣ ಶಿಕ್ಷೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



