Crime Newsರಾಷ್ಟ್ರೀಯ ಸುದ್ದಿ

ವಿಚ್ಛೇದನ ನೀಡಿದ್ದಕ್ಕೆ ಪತ್ನಿಯ ಮೇಲೆ ಆಸಿಡ್ ದಾಳಿ: ಪ್ರೀತಿಯ ಹೆಸರಲ್ಲಿ ಕ್ರೌರ್ಯ ಮೆರೆದ ಪತಿ; ಮಹಿಳೆಯ ಕಣ್ಣಿನ ದೃಷ್ಟಿ ಶಾಶ್ವತ ಹಾನಿ!

Share News

ಪಲ್ಲವರಂ: ಪ್ರೀತಿಸಿ ಮದುವೆಯಾದ ಪತ್ನಿಯೇ ವಿಚ್ಛೇದನಕ್ಕೆ ಮುಂದಾದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆಕೆಯ ಮುಖಕ್ಕೆ ಆಸಿಡ್ ಎರಚಿದ ಘೋರ ಘಟನೆ ಪಲ್ಲವರಂನಲ್ಲಿ ನಡೆದಿದೆ. ಈ ಭೀಕರ ದಾಳಿಯಿಂದಾಗಿ ಸಂತ್ರಸ್ತ ಮಹಿಳೆಯ ಒಂದು ಕಣ್ಣಿನ ದೃಷ್ಟಿ ಶಾಶ್ವತವಾಗಿ ನಶಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂತ್ರಸ್ತ ಮಹಿಳೆ ಸನಾ ಫಾತಿಮಾ ಮತ್ತು ಆರೋಪಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಅಲಿಯ ಅಸಲಿ ಬಣ್ಣ ಬಯಲಾಗಿತ್ತು. ಮದ್ಯವ್ಯಸನಿಯಾಗಿದ್ದ ಈತ ಪ್ರತಿದಿನ ಪತ್ನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದನು. ಪತಿಯ ಅತಿಯಾದ ಕಿರುಕುಳವನ್ನು ಸಹಿಸಲಾರದೆ ಸನಾ ಫಾತಿಮಾ ಅವರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿ, ಸದ್ಯ ತಾಯಿ ಮನೆಯಲ್ಲಿ ವಾಸವಿದ್ದರು.

​ಪತ್ನಿ ತನಗೆ ವಿಚ್ಛೇದನ ನೀಡುತ್ತಿದ್ದಾಳೆ ಎಂಬ ದ್ವೇಷ ಬೆಳೆಸಿಕೊಂಡಿದ್ದ ಮೊಹಮ್ಮದ್ ಅಲಿ, ಆಕೆಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದನು. ಮಾರ್ಚ್ 15ರಂದು ಸನಾ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ಅನ್ನು ಹಿಡಿದು ಬಂದ ಈತ ಏಕಾಏಕಿ ಅವರ ಮುಖಕ್ಕೆ ಎರಚಿದ್ದಾನೆ. ಆಸಿಡ್ ತಗುಲಿ ತೀವ್ರ ನೋವಿನಿಂದ ಕಿರುಚುತ್ತಾ ಸನಾ ಅವರು ಜೀವ ಉಳಿಸಿಕೊಳ್ಳಲು ಓಡಿದರೂ, ಬಿಡದ ಈ ಕ್ರೂರಿ ಆಕೆಯನ್ನು ಬೆನ್ನಟ್ಟಿ ಮತ್ತಷ್ಟು ಆಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.

​ಈ ಅಮಾನುಷ ದಾಳಿಯಿಂದಾಗಿ ಸನಾ ಫಾತಿಮಾ ಅವರ ಮುಖದ ಭಾಗ ಸುಟ್ಟು ಹೋಗಿದ್ದು, ಎಡಗಣ್ಣಿನ ದೃಷ್ಟಿ ಶಾಶ್ವತವಾಗಿ ಹಾನಿಯಾಗಿದೆ. ಸದ್ಯ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆ ನಡೆದ ತಕ್ಷಣ ಆರೋಪಿ ಮೊಹಮ್ಮದ್ ಅಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪಲ್ಲವರಂ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!