ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಸಿಐ ವಿಜಿ ಕುಮಾರ್ ಕರೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮುಂಬರುವ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಮತ್ತು ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚಿಂತಾಮಣಿನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಅವರು ತಿಳಿಸಿದ್ದಾರೆ.
ಚಿಂತಾಮಣಿ ನಗರದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ ಹಬ್ಬದ ಮೆರವಣಿಗೆ ಮತ್ತು ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕೆಲವು ಪ್ರಮುಖ ನಿಯಮ ಹಾಗೂ ನಿಬಂಧನೆಗಳನ್ನು ಜಾರಿಗೆ ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೆರವಣಿಗೆ ಹಾಗೂ ಆಚರಣೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಸಲು ಅನುಮತಿ ಇರುವುದಿಲ್ಲ.ಮೆರವಣಿಗೆಯಲ್ಲಿ ಬಳಸುವ ಧ್ವಜಗಳು ಹಾಗೂ ಬಾವಲಿಗಳು 3 ಅಡಿಗಿಂತ ಹೆಚ್ಚಿನ ಎತ್ತರ ಹೊಂದಿರಬಾರದು.
ಟ್ಯಾಬ್ಲೋಗಳಿಗೆ ಅನುಮತಿಯಿರುವುದಿಲ್ಲ. ನಿಯಮಬಾಹಿರವಾಗಿ ಹಾಗೂ ಅನುಮತಿಯಿಲ್ಲದೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.ನಗರದಲ್ಲಿ ಫ್ಲೆಕ್ಸ್ ಅಥವಾ ಬ್ಯಾನರ್ಗಳನ್ನು ಅಳವಡಿಸಲು ಸ್ಥಳೀಯ ನಗರಸಭೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು.
ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಗಸ್ತು ಹೆಚ್ಚಿಸಲಾಗುವುದು.
ಸಾರ್ವಜನಿಕರು ಹಾಗೂ ಹಬ್ಬ ಆಚರಿಸುವ ಸಮುದಾಯದ ಮುಖಂಡರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು.
ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಶಿಸ್ತು ಹಾಗೂ ಶಾಂತಿಯಿಂದ ಆಚರಿಸುವಂತೆ ಸಿಐ ವಿಜಿ ಕುಮಾರ್ ಅವರು ನಾಗರಿಕರಿಗೆ ಕೋರಿದ್ದಾರೆ.
ಮುಖಂಡ ಮೂನ್ ಸ್ಟಾರ್ ಗೌಸ್ ಪಾಷಾ ಮಾತನಾಡಿ ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.ಮೆರವಣಿಗೆಯು ,ಜಾಮಿಯಾ ಮಸೀದಿಯಿಂದ ಪ್ರಾರಂಭವಾಗಿ ಹೂವಿನ ಪೇಟೆ ಅಗ್ರಹಾರ ನೆಕ್ಕುಂದಿಪೇಟೆ ,ಪಿಸಿಆರ್ ಕಾಂಪ್ಲೆಕ್ಸ್, ಕೋಲಾರ ಸರ್ಕಲ್ ಹಾಗೂ ಮದೀನಾ ಮಸೀದಿಯನ್ನು ತಲುಪಲಿದೆ.ನಂತರ ಅಲ್ಲಿಂದ ವಾಪಸ್ ಗವರ್ನಮೆಂಟ್ ಬಸ್ ಸ್ಟ್ಯಾಂಡ್ ಹಿಂಭಾಗದ ರಸ್ತೆಯ ಮೂಲಕ ಕಾರ್ ಸ್ಟ್ಯಾಂಡ್, ಪಿಸಿಆರ್ ಕಾಂಪ್ಲೆಕ್ಸ್,ಬಾಗೇಪಲ್ಲಿ ವೃತ್ತದ ಮುಖಾಂತರ ಈದ್ಗಾ ಮೈದಾನಕ್ಕೆ ತಲುಪಲಿದೆ.
ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದ ನಂತರ,ಸಂಜೆ 5:00 ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.
ಈ ಹಿಂದೆಯೂ ಪೊಲೀಸ್ ಇಲಾಖೆಯು ಸೂಕ್ತ ಸಹಕಾರ ನೀಡಿದ್ದು,ಈ ಬಾರಿಯೂ ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿ ಕಾಪಾಡಲು ತಮ್ಮ ಸಂಘಟಕರು ಹಾಗೂ ಮಸೀದಿಯ ಅಧ್ಯಕ್ಷರು ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸೀದಿಗಳ ಪ್ರಮುಖ ಮುಖಂಡರಾದ ಮೂನ್ ಸ್ಟಾರ್ ಗೌಸ್ ಪಾಷಾ,ಶೇಕ್ ಸಾಧಿಕ್ ರಜ್ವಿ,ಸಿ ಕೆ ಎಲ್ ಚಂದ್ ಪಾಷಾ,
ಸಮೀಉಲ್ಲಾ,ಇನಾಯತ್ ಉಲ್ಲಾ,ಅಪ್ಸರ್ ಪಾಷಾ,
ಜಹಿರ್ ಪಾಷಾ,ಯೂನಿಸ್ ಪಾಷಾ,ಡಾ!ಅಝರ್ ಖಾನ್,ಇಮ್ತಿಯಾಜ್,
ಶಬೀರ್ ಪಾಷಾ,ಸೇರಿದಂತೆ ಮತ್ತಿತರದು ಇದ್ದರು.
ವರದಿ: ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ



