ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ಸಿಹಿ ಸುದ್ದಿ: 50,000 ನಿವೇಶನ ಹಂಚಿಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಚುರುಕು

ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ಶೀಘ್ರವೇ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಯಿತು.
ಸರ್ಕಾರದ ಈ ಪ್ರಮುಖ (Flagship) ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಟ್ಟು 50,000 ನಿವೇಶನಗಳನ್ನು ವಿತರಿಸುವ ಬೃಹತ್ ಗುರಿ ಹೊಂದಲಾಗಿದ್ದು, ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ಸೂಚನೆಗಳು:
ಸೆಪ್ಟೆಂಬರ್ 25ರ ಗಡುವು: ಹೊಸ ಭೂಮಿ ಮಂಜೂರಾತಿ ಹಾಗೂ ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಗತ್ಯ ಪ್ರಸ್ತಾವನೆಗಳನ್ನು ಸೆಪ್ಟೆಂಬರ್ 25ರೊಳಗಾಗಿ ‘ಇ-ಆಫೀಸ್’ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.
ಅರ್ಹತೆ ಇಲ್ಲದ ಪ್ರಕರಣಗಳ ಮರುಪರಿಶೀಲನೆ: ಅನರ್ಹ (Unfit) ಎಂದು ಗುರುತಿಸಲಾದ ಪ್ರಕರಣಗಳನ್ನು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಜಿಪಿಎಸ್ (GPS) ಆಧಾರಿತ ವಿಡಿಯೋ ಮತ್ತು ಛಾಯಾಚಿತ್ರಗಳ ಸಹಿತ ವರದಿ ಸಲ್ಲಿಸಬೇಕು.
ಸರ್ಕಾರಿ ಜಮೀನು ಗುರುತಿಸುವಿಕೆ: ನಿವೇಶನಕ್ಕೆ ಸೂಕ್ತವಾದ ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ತಕ್ಷಣವೇ ಪರ್ಯಾಯ ಸರ್ಕಾರಿ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಿದ್ಧಪಡಿಸಬೇಕು.
ಸಾರ್ವಜನಿಕ ಜಾಗೃತಿ: ಗ್ರಾಮೀಣ ಭಾಗದ ಅರ್ಹ ಕುಟುಂಬಗಳಿಗೆ ಸರ್ಕಾರದ ನಿವೇಶನ ಯೋಜನೆಯ ಲಾಭ ಸಿಗುವಂತೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಈ ಮಹತ್ವದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಡಿಡಿಎಲ್ಆರ್ ಭಾವನ, ಎಲ್ಲಾ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಹಾಗೂ ಎಡಿಎಲ್ಆರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



