ಹೆತ್ತವಳೇ ಕಾಲಭೈರವಿ: ಚಲಿಸುವ ರೈಲಿನಡಿ ಮಗಳನ್ನು ತಳ್ಳಿದ ಸರ್ಕಾರಿ ಉದ್ಯೋಗಿ ತಾಯಿ!

ನರ್ಮದಾಪುರಂ (ಮಧ್ಯಪ್ರದೇಶ), ಮಾ. 20: ಹೆತ್ತ ತಾಯಿಯೇ ಮಗಳನ್ನು ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ನರ್ಮದಾಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ 8 ವರ್ಷದ ಪುತ್ರಿಯನ್ನು ಚಲಿಸುತ್ತಿದ್ದ ಚೆನ್ನೈ ಎಕ್ಸ್ಪ್ರೆಸ್ ರೈಲಿನ ಅಡಿಗೆ ತಳ್ಳಿದ್ದು, ಸದ್ಯ ಬಾಲಕಿ ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದಾಳೆ.
ಮಂಗಳವಾರ ರಾತ್ರಿ ನರ್ಮದಾಪುರಂ ನಿಲ್ದಾಣಕ್ಕೆ ಚೆನ್ನೈ ಎಕ್ಸ್ಪ್ರೆಸ್ ರೈಲು ಬರುತ್ತಿದ್ದಂತೆ, ಅಲ್ಲಿಯೇ ನಿಂತಿದ್ದ ಮಹಿಳೆ ದಿಢೀರನೆ ತನ್ನ ಎಂಟು ವರ್ಷದ ಮಗಳನ್ನು ಹಳಿಯ ಕಡೆಗೆ ತಳ್ಳಿದ್ದಾಳೆ. ರೈಲು ಮಗುವಿನ ಮೇಲೆ ಹರಿದಿದ್ದು, ಬಾಲಕಿಯ ತಲೆ ಮತ್ತು ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ರೈಲ್ವೆ ಪೊಲೀಸರು ಮತ್ತು ಸಾರ್ವಜನಿಕರು ಬಾಲಕಿಯನ್ನು ರಕ್ಷಿಸಿ ಭೋಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ವೇಳೆ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಗು ರೈಲಿನಡಿ ಬಿದ್ದಾಗ ರಕ್ಷಿಸಲು ಮುಂದಾದ ಜನರನ್ನು ತಾಯಿ ತಡೆದಿದ್ದಾಳೆ. “ಮಗುವನ್ನು ಉಳಿಸಬೇಡಿ, ಹಾಗೆಯೇ ಬಿಡಿ” ಎಂದು ಕಿರುಚಾಡುತ್ತಾ ಕ್ರೌರ್ಯ ಮೆರೆದಿದ್ದಾಳೆ ಎನ್ನಲಾಗಿದೆ. ಈ ಇಡೀ ಭೀಕರ ದೃಶ್ಯವು ರೈಲ್ವೆ ನಿಲ್ದಾಣದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತಪಟ್ಟ ಗಂಡನ ಅಗಲಿಕೆಯ ನಂತರ ಈ ತಾಯಿ ಮತ್ತು ಮಗಳು ಇಬ್ಬರೇ ವಾಸಿಸುತ್ತಿದ್ದರು. ಆರೋಪಿ ಮಹಿಳೆ ಸರ್ಕಾರಿ ಕೆಲಸದಲ್ಲಿದ್ದರೂ ಸಹ, ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಆಕೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. “ಮಹಿಳೆಯ ಮಾನಸಿಕ ಸ್ಥಿತಿಗತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಬಾಲಕಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ತಾಯಿಯೇ ತನ್ನ ಮಗುವಿನ ಪ್ರಾಣ ತೆಗೆಯಲು ಮುಂದಾದ ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.



