ಬೋನಾಲ ಹಬ್ಬ ಆಚರಿಸಿ ಟೀಕೆಗೆ ಗುರಿಯಾದ ನಟಿ ಫಾರಿಯಾ ಅಬ್ದುಲ್ಲಾ: ಜಾಲತಾಣದಲ್ಲಿ ಕಣ್ಣೀರಿಟ್ಟ ನಟಿ

ಹಿಂದೂಗಳ ಪವಿತ್ರ ಬೋನಾಲ ಹಬ್ಬದಲ್ಲಿ ಭಾಗವಹಿಸಿ, ಕಳಶ ಹೊತ್ತು ಸಂಭ್ರಮಿಸಿದ್ದಕ್ಕಾಗಿ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ನಿಂದನೆಗೆ ಗುರಿಯಾಗಿದ್ದಾರೆ.
ಬೋನಾಲ ಹಬ್ಬದ ಸಂಭ್ರಮದ ವೇಳೆ ಪೋತಾಲರಾಜುಗಳೊಂದಿಗೆ ನಟಿ ಫಾರಿಯಾ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಅವರನ್ನು ‘ಕಾಫಿರ್’ ಎಂದು ಕಟುವಾಗಿ ಟೀಕಿಸಿದ್ದರು. ಈ ನಿಂದನೆಗಳಿಂದ ತೀವ್ರ ಮನನೊಂದ ನಟಿ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವೆ – ಫಾರಿಯಾ ಭಾವುಕ:
“ನನ್ನ ತಂದೆ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಮತಾಂತರವಾದವರು. ಅವರು ಇಸ್ಲಾಂನಲ್ಲಿರುವ ಒಳ್ಳೆಯ ವಿಚಾರಗಳನ್ನೇ ನಮಗೆ ಕಲಿಸಿದ್ದಾರೆ. ನಾನು ಕೂಡ ಧರ್ಮದಲ್ಲಿ ಸದಾ ಒಳ್ಳೆಯದನ್ನೇ ನೋಡಿದ್ದೇನೆ. ನನಗೆ ‘ಅಲ್ಲಾಹ್’ ಎಂದರೆ ಬೆಳಕು ಎಂಬುದು ಗೊತ್ತು. ಎಲ್ಲವನ್ನೂ ಒಗ್ಗೂಡಿಸುವ ಆ ಬೆಳಕನ್ನು ನೀವು ಹೇಗೆ ಸಂಕುಚಿತಗೊಳಿಸುತ್ತೀರಿ?” ಎಂದು ಫಾರಿಯಾ ಪ್ರಶ್ನಿಸಿದ್ದಾರೆ.
”ನಾನು ಪ್ರೀತಿ, ಒಗ್ಗಟ್ಟು ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನನ್ನನ್ನು ದ್ವೇಷಿಸುವವರಿಗೂ ನಾನು ಪ್ರೀತಿಯನ್ನೇ ಹಂಚುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೇವರನ್ನು ಕಾಣಬೇಕು ಎಂಬುದು ನನ್ನ ನಂಬಿಕೆ,” ಎಂದು ನಟಿ ಭಾವುಕರಾಗಿ ಹೇಳಿದ್ದಾರೆ.
ಧರ್ಮದ ಹೆಸರಿನಲ್ಲಿ ದ್ವೇಷ ಹರಡುವುದಕ್ಕಿಂತ ಪರಸ್ಪರ ಗೌರವ, ಪ್ರೀತಿ ಮತ್ತು ಸಹಬಾಳ್ವೆ ಮುಖ್ಯ ಎಂಬ ನಟಿ ಫಾರಿಯಾ ಅಬ್ದುಲ್ಲಾ ಅವರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಹಾಗೂ ಅನೇಕರ ಬೆಂಬಲಕ್ಕೆ ಕಾರಣವಾಗಿವೆ.



