Crime News

ಮದುವೆ ನಿರಾಕರಿಸಿದ ವರ: ಮನನೊಂದು ವಿಷ ಸೇವಿಸಿದ್ದ ತಾಯಿ-ಮಗಳು ಚಿಕಿತ್ಸೆ ಫಲಿಸದೆ ಸಾವು

Share News

ಅಮರಾವತಿ: ಅದ್ಧೂರಿಯಾಗಿ ನಿಶ್ಚಿತಾರ್ಥ ಮುಗಿದ ಬಳಿಕ ವರನು ಮದುವೆಗೆ ನಿರಾಕರಿಸಿದ ಕಾರಣಕ್ಕೆ ಮನನೊಂದು ವಿಷ ಸೇವಿಸಿದ್ದ ತಾಯಿ ಮತ್ತು ಮಗಳು ವಾರದ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಸಂಭವಿಸಿದೆ.

ಬಾಪಟ್ಲ ಜಿಲ್ಲೆಯ ಮಾರ್ಟೂರು ಮಂಡಲದ ದ್ರೋಣದುಲ ಗ್ರಾಮದ ಶ್ರೀನಿವಾಸ ರಾವ್ ಮತ್ತು ಸುಜಾತ ದಂಪತಿಯ ಪುತ್ರಿ ದಿವ್ಯಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮಾರ್ಟೂರು ಮೂಲದ ಮತ್ತೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಹಿರಿಯರು ಮದುವೆ ನಿಶ್ಚಯಿಸಿದ್ದರು. ಕಳೆದ ವರ್ಷ ಡಿಸೆಂಬರ್ 14ರಂದು ಇಬ್ಬರಿಗೂ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು.

ಇದೇ ತಿಂಗಳ 4ರಂದು ಮದುವೆಯ ದಿನಾಂಕ ನಿಗದಿಪಡಿಸಲು ವರನ ಕುಟುಂಬಸ್ಥರನ್ನು ಮನೆಗೆ ಆಹ್ವಾನಿಸಲಾಗಿತ್ತು. ಆದರೆ, ಈ ವೇಳೆ ವರನು ಅನಿರೀಕ್ಷಿತ ತಿರುವು ನೀಡಿದ್ದಾನೆ. ವಧು ದಿವ್ಯಾ ಬಗ್ಗೆ ರಹಸ್ಯವಾಗಿ ಸಂಗ್ರಹಿಸಿದ್ದ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಆಕೆಯ ಕುಟುಂಬಸ್ಥರಿಗೇ ತೋರಿಸಿ, “ನನಗೆ ಈ ಮದುವೆ ಇಷ್ಟವಿಲ್ಲ” ಎಂದು ಹೇಳಿ ಮದುವೆಯನ್ನು ನಿರಾಕರಿಸಿದ್ದಾನೆ. ಮದುವೆ ನಿಶ್ಚಯವಾಗಿ ಎಲ್ಲೆಡೆ ಸುದ್ದಿ ಹರಡಿದ ನಂತರ ವರ ನೀಡಿದ ಈ ಆಘಾತವನ್ನು ತಾಯಿ-ಮಗಳು ಸಹಿಸಿಕೊಳ್ಳಲಾಗಲಿಲ್ಲ.

ತೀವ್ರ ಅವಮಾನ ಹಾಗೂ ಮಾನಸಿಕ ವೇದನೆಗೆ ಒಳಗಾದ ಸುಜಾತ ಮತ್ತು ದಿವ್ಯಾ ಅಂದೇ ರಾತ್ರಿ ವಿಷ ಸೇವಿಸಿದ್ದರು. ಮರುದಿನ ಬೆಳಿಗ್ಗೆ ಶ್ರೀನಿವಾಸ ರಾವ್ ಅವರು ಪತ್ನಿ ಮತ್ತು ಮಗಳನ್ನು ಎಬ್ಬಿಸಲು ಹೋದಾಗ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಅವರನ್ನು ಗುಂಟೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಒಂದು ವಾರದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತಾಯಿ ಸುಜಾತ ಗುರುವಾರ ಬೆಳಿಗ್ಗೆ ಮೃತಪಟ್ಟರೆ, ಅವರ ಸಾವಿನ ಕೆಲವೇ ಗಂಟೆಗಳ ನಂತರ ಮಗಳು ದಿವ್ಯಾ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮೃತ ದಿವ್ಯಾಳ ತಂದೆ ಶ್ರೀನಿವಾಸ ರಾವ್ ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆ ನಿರಾಕರಿಸಿದ ವರನ ನಡವಳಿಕೆ ಹಾಗೂ ಆತ ಪ್ರದರ್ಶಿಸಿದ ವಿಡಿಯೋ/ಫೋಟೋಗಳ ಕುರಿತು ಅನುಮಾನ ವ್ಯಕ್ತಪಡಿಸಲಾಗಿದ್ದು, ಗುಂಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಮೆರಿಕಾದಲ್ಲಿರುವ ಮೃತ ಸುಜಾತ ಅವರ ಪುತ್ರ ಊರಿಗೆ ಮರಳಿದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!