ರಾಯಚೂರು: ಖಾತಾ ಮ್ಯುಟೇಷನ್‌ಗೆ ₹2 ಲಕ್ಷ ಲಂಚಕ್ಕೆ ಬೇಡಿಕೆ; ಸಿನಿಮೀಯ ಹೈಡ್ರಾಮಾ ನಡೆಸಿ ತಪ್ಪಿಸಿಕೊಂಡಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ!

ರಾಯಚೂರು: ಖಾತಾ ಮ್ಯುಟೇಷನ್ ಮಾಡಿಕೊಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಲೋಕಾಯುಕ್ತ ದಾಳಿಯಿಂದ ತಪ್ಪಿಸಿಕೊಳ್ಳಲು ಸಿನಿಮೀಯವಾಗಿ ಓಡಿಹೋಗಿದ್ದ ಪಟ್ಟಣ ಪಂಚಾಯತಿ ಅಧಿಕಾರಿಯನ್ನು ಕೊನೆಗೂ ಅರೆಸ್ಟ್ ಮಾಡಲಾಗಿದೆ. ಸಿರವಾರ ಪಟ್ಟಣ ಪಂಚಾಯತ್‌ನ ಚೀಫ್ ಆಫೀಸರ್ ಸುರೇಶ್ ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.
ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ ಮ್ಯುಟೇಷನ್ ಮಾಡಿಕೊಡಲು ಲೇಔಟ್ ಮಾಲೀಕ ರಘುರಾಮ್ ರೆಡ್ಡಿ ಎಂಬುವವರಿಂದ ಸುರೇಶ್ ಶೆಟ್ಟಿ ಅವರು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕಳೆದ ಎರಡು ತಿಂಗಳಿಂದ ಫೈಲ್ ಬಾಕಿ ಇಟ್ಟುಕೊಂಡು ಹಣಕ್ಕಾಗಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ರಘುರಾಮ್ ರೆಡ್ಡಿ ಅವರು ರಾಯಚೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ಎಸ್.ಪಿ. ಸಿದ್ದರಾಜು ಅವರು ಕಾರ್ಯಾಚರಣೆಗೆ ಮೂರು ತಂಡಗಳನ್ನು ರಚಿಸಿದ್ದರು. ನಿನ್ನೆ ದೂರುದಾರರು ಚೀಫ್ ಆಫೀಸರ್‌ಗೆ ₹1 ಲಕ್ಷ ನಗದು ನೀಡುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿದರು. ಆದರೆ, ಅಧಿಕಾರಿ ಸುರೇಶ್ ಶೆಟ್ಟಿ ಕಾರ್‌ನಲ್ಲಿ ಹಣದ ಸಮೇತ ಅಲ್ಲಿಂದ ಎಸ್ಕೇಪ್ ಆಗಿದ್ದರು. ಈ ವೇಳೆ ಲೋಕಾಯುಕ್ತ ತಂಡವು ಬೈಕ್‌ನಲ್ಲಿ ಫಾಲೋ ಮಾಡಿದರೂ, ಅಧಿಕಾರಿ ಸಿಗದೆ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಸಿರವಾರದಿಂದ ಕಾರ್‌ನಲ್ಲಿ ಕವಿತಾಳಕ್ಕೆ ಹೋದ ಸುರೇಶ್ ಶೆಟ್ಟಿ, ಅಲ್ಲಿನ ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಲೋಕಾಯುಕ್ತರು ಆರೋಪಿಯ ಮೊಬೈಲ್ ಲೋಕೇಶನ್ ಟ್ರೇಸ್ ಮಾಡಿದ್ದಾರೆ. ಇಂದು ಮುಂಜಾನೆ ಕವಿತಾಳದಲ್ಲಿ ಆರೋಪಿಯನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಭ್ರಷ್ಟ ಅಧಿಕಾರಿ ಸುರೇಶ್ ಶೆಟ್ಟಿಯನ್ನು ಕವಿತಾಳ ಪ್ರವಾಸಿ ಮಂದಿರಕ್ಕೆ (IB) ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕ ಕೆಲಸಕ್ಕೆ ಲಂಚ ಕೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅಧಿಕಾರಿಯ ಹೈಡ್ರಾಮಾ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.



