ಬೆಳಕೆ ಗ್ರಾಮದಲ್ಲಿ ರಸ್ತೆ ದುಸ್ಥಿತಿ: ಮೂರು ವರ್ಷಗಳಿಂದ ಜನರ ಪರದಾಟ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ವ್ಯಾಪ್ತಿಯ ಕಾನಮದ್ಲು ಕ್ರಾಸ್‌ನಿಂದ ಕೊಚ್ಚರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಎರಡು ಕಿಲೋಮೀಟರ್ ರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹಾಳಾಗಿ ದುರಸ್ತಿ ಕಾಣದೇ ಉಳಿದಿದ್ದು, ಗ್ರಾಮಸ್ಥರ ಸಂಕಷ್ಟ ಹೆಚ್ಚಿಸಿದೆ.
ಮಳೆಯ ಸಮಯದಲ್ಲಿ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಟ್ಟು, ವಾಹನ ಸಂಚಾರವೇ ಅಸಾಧ್ಯವಾಗುತ್ತದೆ. ಪರಿಣಾಮವಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರು ದಿನನಿತ್ಯ ಸಂಚಾರದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ರಸ್ತೆ ಕೊಚ್ಚರೆ ಹಾಗೂ ಬೊಮ್ಮನಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಹೋಗುವ ಪ್ರಮುಖ ಮಾರ್ಗವಾಗಿರುವುದರಿಂದ ಭಕ್ತರು ಸಹ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಯ ದುಸ್ಥಿತಿಯಿಂದ ಆಟೋ ಚಾಲಕರು ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದು, ಕೆಲವರು ಹೆಚ್ಚುವರಿ ಬಾಡಿಗೆ ಕೇಳುತ್ತಿರುವುದರಿಂದ ಸಾರ್ವಜನಿಕರ ಮೇಲೆ ಆರ್ಥಿಕ ಭಾರ ಹೆಚ್ಚಾಗಿದೆ.
ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಜನರ ಸಂಕಷ್ಟ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.






