ಅಂಕೋಲಾ : ಶಿರೂರಿನಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯ ಮಣ್ಣು ಸುರಿದು ಕೃತಕ ಗುಡ್ಡ ನಿರ್ಮಾಣ : ಮಳೆಗಾಲದಲ್ಲಿ ಕಾದಿದೆಯಾ ಮಹಾ ಕಂಟಕ?

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಗ್ರಾಮಸ್ಥರು ಮತ್ತೊಮ್ಮೆ ಆತಂಕದ ನೆರಳಿನಲ್ಲಿ ದಿನ ದೂಡುವಂತಾಗಿದೆ. ರಸ್ತೆ ಕಾಮಗಾರಿಗೆಂದು ಅಗೆದು ತೆಗೆದ ಮಣ್ಣನ್ನು ಐ.ಆರ್.ಬಿ ಕಂಪನಿಯು ಸುರಕ್ಷಿತವಾಗಿ ವಿಲೇವಾರಿ ಮಾಡುವ ಬದಲು, ಅವೈಜ್ಞಾನಿಕವಾಗಿ ಒಂದೇ ಕಡೆ ರಾಶಿ ಹಾಕಿ ಬೃಹತ್ ‘ಕೃತಕ ಗುಡ್ಡ’ವನ್ನೇ ನಿರ್ಮಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಮಣ್ಣಿನಿಂದಲೇ ಎದ್ದು ನಿಂತ ಗುಡ್ಡ:
ನಿಯಮಗಳ ಪ್ರಕಾರ, ರಸ್ತೆ ಅಥವಾ ಗುಡ್ಡ ಅಗೆಯುವಾಗ ಬರುವ ಮಣ್ಣನ್ನು ಜನವಸತಿ ಹಾಗೂ ರಸ್ತೆಗೆ ತೊಂದರೆಯಾಗದಂತೆ ನಿಗದಿತ ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಿ ವಿಲೇವಾರಿ ಮಾಡಬೇಕು. ಆದರೆ, ಶಿರೂರು ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಗೆ ತೆಗೆದ ಟನ್‌ಗಟ್ಟಲೆ ಮಣ್ಣನ್ನು ಸ್ಥಳದಲ್ಲೇ ಎತ್ತರವಾಗಿ ಸುರಿಯಲಾಗುತ್ತಿದ್ದು, ಇದು ನೋಡಲು ಮತ್ತೊಂದು ನೈಸರ್ಗಿಕ ಗುಡ್ಡದಂತೆಯೇ ಭಾಸವಾಗುತ್ತಿದೆ. ಯಾವುದೇ ತಡೆಗೋಡೆ ಅಥವಾ ಭದ್ರತೆ ಇಲ್ಲದೆ, ಕೇವಲ ಬಿಡಿ ಮಣ್ಣಿನಿಂದಲೇ ಈ ಬೃಹತ್ ರಾಶಿಯನ್ನು ನಿರ್ಮಿಸಲಾಗಿದೆ.
ಮಳೆಗಾಲದಲ್ಲಿ ಕಾದಿದೆಯೇ ಮತ್ತೊಂದು ಕಂಟಕ?
ಶಿರೂರು ಗ್ರಾಮವು ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಗುಡ್ಡ ಕುಸಿತದ ಕರಾಳ ನೆನಪಿನಿಂದ ಇನ್ನೂ ಹೊರಬಂದಿಲ್ಲ. ಆ ದುರಂತದ ಗಾಯ ಮಾಸುವ ಮುನ್ನವೇ, ಹೆದ್ದಾರಿ ಪಕ್ಕದಲ್ಲಿ ಮಣ್ಣಿನಿಂದಲೇ ನಿರ್ಮಿಸಲಾಗಿರುವ ಈ ಕೃತಕ ಗುಡ್ಡವು ಸ್ಥಳೀಯರ ನಿದ್ದೆಗೆಡಿಸಿದೆ. ಮುಂಬರುವ ಮಳೆಗಾಲದಲ್ಲಿ ಭಾರಿ ಮಳೆಯಾದರೆ, ಈ ಸಡಿಲವಾದ ಮಣ್ಣಿನ ರಾಶಿ ಮಳೆಯ ನೀರನ್ನು ಹೀರಿಕೊಂಡು ಸುಲಭವಾಗಿ ಕುಸಿದು ಬೀಳುವ ಅಪಾಯವಿದೆ. ಇದು ಹೆದ್ದಾರಿ ಸಂಚಾರಕ್ಕೆ ಮಾತ್ರವಲ್ಲದೆ, ಕೆಳಗಿನ ಭಾಗದಲ್ಲಿ ವಾಸವಾಗಿರುವ ಜನರ ಜೀವಕ್ಕೂ ಭೀತಿ ಎದುರಾಗಿದೆ.
ಆದ್ದರಿಂದ ಕೂಡಲೇ ಉತ್ತರ ಕನ್ನಡ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಮಳೆಗಾಲ ಆರಂಭವಾಗುವ ಮುನ್ನವೇ ಈ ಕೃತಕ ಮಣ್ಣಿನ ಗುಡ್ಡವನ್ನು ತೆರವುಗೊಳಿಸಿ, ಮಣ್ಣನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಐ.ಆರ್.ಬಿ ಕಂಪನಿಗೆ ಕಟ್ಟುನಿಟ್ಟಿನ ಕಾನೂನು ಸೂಚನೆ ನೀಡಬೇಕು. ತಪ್ಪಿದ್ದಲ್ಲಿ ಮುಂದಾಗುವ ಯಾವುದೇ ಅನಾಹುತಗಳಿಗೆ ಕಂಪನಿಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.




