ಶರಾವತಿ ಯೋಜನೆ ಜಾರಿಯಾದರೆ ನನ್ನ ಬಲಿಯ ಮೇಲೆಯೇ ಆಗಬೇಕು”: ಬಂಗಾರಮಕ್ಕಿ ಶ್ರೀಗಳ ಆಕ್ರೋಶ

ಪಶ್ಚಿಮ ಘಟ್ಟ ಉಳಿಸಲು ಮಾ. 27ರಿಂದ ಬೃಹತ್ ಜಾಗೃತಿ ಸಪ್ತಾಹ: ಇಸ್ರೋ ಮಾಜಿ ಅಧ್ಯಕ್ಷರಿಂದ ಉದ್ಘಾಟನೆ
ಕಾರವಾರ: “ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟದ ವಿನಾಶಕ್ಕೆ ಕಾರಣವಾಗುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗುವುದೇ ಆದರೆ, ಅದು ನನ್ನ ಬಲಿಯ ಮೇಲೆಯೇ ಆಗಬೇಕು” ಎಂದು ಹೊನ್ನಾವರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ಈ ಯೋಜನೆಯ ವಿರುದ್ಧ ಜನಜಾಗೃತಿ ಮೂಡಿಸಲು ಮಾರ್ಚ್ 27 ರಿಂದ ಏಪ್ರಿಲ್ 2 ರವರೆಗೆ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಬೃಹತ್ ಜಾಗೃತಿ ಹಾಗೂ ಸಾಂಸ್ಕೃತಿಕ ಸಪ್ತಾಹ’ ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಅವರು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಸುಮಾರು 15,000 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಲಿದೆ. ಸುಮಾರು 18,000 ಟನ್ ಸ್ಫೋಟಕ ಬಳಸಿ ಸುರಂಗ ಕೊರೆಯುವುದರಿಂದ ಪರಿಸರಕ್ಕೆ ತುಂಬಲಾರದ ನಷ್ಟವಾಗಲಿದೆ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.
“ಜಿಲ್ಲೆಯಲ್ಲಿ ಶೇ. 84 ರಷ್ಟಿದ್ದ ಅರಣ್ಯ ಈಗ ಶೇ. 42 ಕ್ಕೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆ ಆಕ್ಸಿಜನ್ ಬಂಕ್ಗಳನ್ನು ಅವಲಂಬಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಸೋಲಾರ್ ವಿದ್ಯುತ್ ಉತ್ಪಾದನೆಯಂತಹ ಮಾರ್ಗಗಳನ್ನು ಸರ್ಕಾರ ಬಳಸಿಕೊಳ್ಳಲಿ,” ಎಂದು ಅವರು ಸಲಹೆ ನೀಡಿದರು.
ಏಳು ದಿನಗಳ ಸಪ್ತಾಹದ ಪ್ರಮುಖ ಕಾರ್ಯಕ್ರಮಗಳು:
ಉದ್ಘಾಟನೆ (ಮಾ. 27): ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರಿಂದ ಸಪ್ತಾಹಕ್ಕೆ ಚಾಲನೆ.
ಶರಾವತಿ ಆರತಿ (ಮಾ. 28): 10ನೇ ವರ್ಷದ ನದಿ ಆರತಿ ಸಂಭ್ರಮ ಹಾಗೂ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಸಾಹಿತ್ಯ ಗೋಷ್ಠಿ.
ಸಹ್ಯಾದ್ರಿ ಸಮಾವೇಶ (ಮಾ. 29): ಜಲತಜ್ಞ ರಾಜೇಂದ್ರ ಸಿಂಗ್ ಹಾಗೂ 40ಕ್ಕೂ ಹೆಚ್ಚು ಸಾಧು-ಸಂತರು, ವಿಜ್ಞಾನಿಗಳಿಂದ ಪರಿಸರ ಚರ್ಚೆ.
ಉದ್ಯೋಗ ಮೇಳ (ಮಾ. 30): 60ಕ್ಕೂ ಹೆಚ್ಚು ಕಂಪನಿಗಳ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳ.
ಸಮುದಾಯಗಳ ಸಂಗಮ (ಮಾ. 31, ಏ. 01): ಮೀನುಗಾರರ ಸಮಾವೇಶ ಮತ್ತು ಪಾರಂಪರಿಕ ವೈದ್ಯರ ಸಮ್ಮೇಳನ.
ಸಮಾರೋಪ (ಏ. 02): ಬ್ರಹ್ಮರಥೋತ್ಸವದೊಂದಿಗೆ ಸಪ್ತಾಹ ಸಂಪನ್ನ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗಿ. ಅಂದು 20 ಲಕ್ಷ ರೂ. ಮೌಲ್ಯದ ಉಚಿತ ಔಷಧ ವಿತರಣೆ ಹಾಗೂ ಬೃಹತ್ ಆರೋಗ್ಯ ಶಿಬಿರ ಆಯೋಜನೆ.
ಈಗಾಗಲೇ ಈ ಯೋಜನೆಯ ವಿರುದ್ಧ ಆನ್ಲೈನ್ ಮೂಲಕ 75,000ಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.



