ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಉತ್ತರ ಕನ್ನಡ: ಇಂದಿರಾ ಕ್ಯಾಂಟೀನ್‌ಗಳಿಗಿಲ್ಲ ಸಿಲೆಂಡರ್ ಸಮಸ್ಯೆ; ನಿರಂತರ ಆಹಾರ ವಿತರಣೆ

Share News

ಕಾರವಾರ: ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲೆಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರೂ, ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆಗೆ ಯಾವುದೇ ಅಡ್ಡಿಯಾಗಿಲ್ಲ. ಸಾರ್ವಜನಿಕರಿಗೆ ಎಂದಿನಂತೆ ಶುಚಿ ಮತ್ತು ರುಚಿಯಾದ ಊಟ ಹಾಗೂ ಉಪಹಾರವನ್ನು ಒದಗಿಸಲು ಜಿಲ್ಲಾಡಳಿತ ಮತ್ತು ಸಂಬಂಧಿತ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ದಾಂಡೇಲಿ ಸೇರಿದಂತೆ ಒಟ್ಟು 13 ಇಂದಿರಾ ಕ್ಯಾಂಟೀನ್‌ಗಳು ಸಕ್ರಿಯವಾಗಿವೆ. ಈ ಪೈಕಿ ಕಾರವಾರ ಮತ್ತು ಶಿರಸಿಯಂತಹ ದೊಡ್ಡ ಕೇಂದ್ರಗಳಿಗೆ ವಾರಕ್ಕೆ 6 ಸಿಲೆಂಡರ್‌ಗಳ ಅಗತ್ಯವಿದ್ದರೆ, ಉಳಿದ ಕೇಂದ್ರಗಳಿಗೆ 3 ರಿಂದ 4 ಸಿಲೆಂಡರ್‌ಗಳ ಅವಶ್ಯಕತೆಯಿದೆ. ಪ್ರಸ್ತುತ ಆಯಾ ವ್ಯಾಪ್ತಿಯ ಅನಿಲ ಸರಬರಾಜುದಾರರು ಬೇಡಿಕೆಗೆ ತಕ್ಕಂತೆ ಸಿಲೆಂಡರ್‌ಗಳನ್ನು ಒದಗಿಸುತ್ತಿದ್ದು, ಎಲ್ಲಿಯೂ ಅಡುಗೆ ಸ್ಥಗಿತಗೊಂಡ ದೂರುಗಳು ಬಂದಿಲ್ಲ.

ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳ ಪ್ರಕಾರ, ಅನಿಲ ಪೂರೈಕೆಯಲ್ಲಿ ಅಲ್ಪ ವಿಳಂಬವಾದರೂ ಆಹಾರ ವಿತರಣೆ ನಿಲ್ಲಿಸದಂತೆ ಕ್ರಮ ಕೈಗೊಳ್ಳಲಾಗಿದೆ.

ಘಟ್ಟದ ಮೇಲಿನ ಭಾಗ: ರಿವಾರ್ಡ್ ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ ಅವರ ಪ್ರಕಾರ, ಅಗತ್ಯಕ್ಕೆ ಅನುಗುಣವಾಗಿ ಸಿಲೆಂಡರ್ ಸರಬರಾಜಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿಲ್ಲ.

ಕರಾವಳಿ ಭಾಗ: ಚೆಪ್ ಟೆಕ್ ಸಂಸ್ಥೆಯ ರಂಜನ್ ಶೆಟ್ಟಿ ಅವರು ಮಾತನಾಡಿ, “ಆರಂಭದಲ್ಲಿ ಒಂದು ದಿನ ಮಾತ್ರ ಸಮಸ್ಯೆಯಾದಾಗ ಸೌದೆ ಒಲೆ ಬಳಸಿ ಆಹಾರ ಸಿದ್ಧಪಡಿಸಿ ವಿತರಿಸಲಾಗಿತ್ತು. ಈಗ ಯಾವುದೇ ತೊಂದರೆಯಿಲ್ಲ,” ಎಂದು ತಿಳಿಸಿದ್ದಾರೆ.

ಜಿಲ್ಲೆಯ ಹಾಸ್ಟೆಲ್‌ಗಳು, ಆಸ್ಪತ್ರೆಗಳು ಮತ್ತು ಬಿಸಿಯೂಟದಂತಹ ಅಗತ್ಯ ಸೇವೆಗಳಿಗೆ ಅನಿಲದ ಕೊರತೆಯಾಗದಂತೆ ಆದ್ಯತೆ ನೀಡಲಾಗುವುದು ಎಂದು ಸರಬರಾಜು ಸಂಸ್ಥೆಗಳು ಸ್ಪಷ್ಟಪಡಿಸಿವೆ.

“ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಲೆಂಡರ್ ಕೊರತೆಯ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ಸಮಸ್ಯೆ ಕಂಡುಬಂದಲ್ಲಿ ಗುತ್ತಿಗೆದಾರರು ತಕ್ಷಣವೇ ಸ್ಥಳೀಯ ಪೌರಾಯುಕ್ತರನ್ನು ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಸಂಪರ್ಕಿಸಬಹುದು. ಅಂತಹ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು.”

— ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕಾರವಾರ.

ಸಾರ್ವಜನಿಕ ಸೇವೆಗೆ ಯಾವುದೇ ಧಕ್ಕೆಯಾಗದಂತೆ ಜಿಲ್ಲಾಡಳಿತವು ಅಡುಗೆ ಅನಿಲ ಪೂರೈಕೆಯ ಮೇಲೆ ನಿರಂತರ ನಿಗಾ ವಹಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!