ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕಿ ಪತ್ತೆಗೆ ಮುಂದುವರಿದ ಬೃಹತ್ ಶೋಧ: ರಕ್ಷಣಾ ಪಡೆಗಳ ಪರಿಶ್ರಮಕ್ಕೆ ಸಾರ್ವಜನಿಕರ ಶ್ಲಾಘನೆ

ದಾಬಸ್ಪೇಟೆ (ಆ. 17): ತುಮಕೂರು ರಸ್ತೆಯ ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ ತೆರಳಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕಿ ಅದ್ವೈತ್ ಉಪಾಧ್ಯಾಯ (31) ಪತ್ತೆಗಾಗಿ ವಿವಿಧ ಇಲಾಖೆಗಳ ರಕ್ಷಣಾ ಪಡೆಗಳು ನಡೆಸುತ್ತಿರುವ ಭಗೀರಥ ಯತ್ನ ಹಾಗೂ ಬದ್ಧತೆಗೆ ಸಾರ್ವಜನಿಕ ವಲಯದಿಂದ ತೀವ್ರ ಶ್ಲಾಘನೆ ವ್ಯಕ್ತವಾಗಿದೆ.
ಕಾಡುಗೋಡಿಯ ಮೈತ್ರಿ ಲೇಔಟ್ ನಿವಾಸಿಯಾಗಿರುವ ಅದ್ವೈತ್, ಕಳೆದ ಶುಕ್ರವಾರ (ಆ. 7) ಶಿವಗಂಗೆ ಬೆಟ್ಟಕ್ಕೆ ಬಂದಿದ್ದರು. ಅವರು ಬೆಟ್ಟ ಏರುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಪಸ್ ಇಳಿದು ಬಾರದ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವುದು ದೃಢಪಟ್ಟಿತ್ತು.
ಕಠಿಣ ಸವಾಲುಗಳ ನಡುವೆಯೂ ಶೋಧ ಕಾರ್ಯಾಚರಣೆ:
ಶಿವಗಂಗೆ ಬೆಟ್ಟದ ಕಡಿದಾದ ಕಲ್ಲು ಬಂಡೆಗಳು, ಅಪಾಯಕಾರಿ ಕಂದರಗಳು, ಇಳಿಜಾರು, ದಟ್ಟ ಮರಗಿಡಗಳು ಹಾಗೂ ಕಾಡುಪ್ರಾಣಿಗಳ ಭೀತಿಯ ನಡುವೆಯೂ ಶೋಧ ಕಾರ್ಯಾಚರಣೆ ತೀವ್ರವಾಗಿ ಸಾಗಿದೆ. ವಿಶಾಲವಾದ ಕಂದರಗಳು ಹಾಗೂ ಶಾಂತಲಾ ಡ್ರಾಪ್ ಸುತ್ತಮುತ್ತಲಿನ ಅಪಾಯಕಾರಿ ಪ್ರದೇಶಗಳಲ್ಲಿ ಹುಡುಕಾಟ ನಡೆಸುವುದು ಅತ್ಯಂತ ಸಾಹಸದ ಕೆಲಸವಾಗಿದ್ದರೂ, ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಮುನ್ನುಗ್ಗುತ್ತಿದ್ದಾರೆ.
ಅಹೋರಾತ್ರಿ ಶ್ರಮಿಸುತ್ತಿರುವ ಜಂಟಿ ಪಡೆಗಳು:
ಕಳೆದ ಮೂರ್ನಾಲ್ಕು ದಿನಗಳಿಂದ ಎನ್.ಡಿ.ಆರ್.ಎಫ್ (NDRF), ಅರಣ್ಯ ಇಲಾಖೆ ಸಿಬ್ಬಂದಿ, ಶ್ವಾನದಳ ಹಾಗೂ ಕಾಡುಗೋಡಿ, ನೆಲಮಂಗಲ ಮತ್ತು ದಾಬಸ್ಪೇಟೆ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗತ್ಯ ಆಧುನಿಕ ಉಪಕರಣ ಹಾಗೂ ಸಲಕರಣೆಗಳೊಂದಿಗೆ ಶೋಧದಲ್ಲಿ ನಿರತರಾಗಿರುವ ಪಡೆಗಳ ದಕ್ಷತೆ, ಬದ್ಧತೆ ಮತ್ತು ಸೇವಾ ಮನೋಭಾವಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯರು ಹ್ಯಾಟ್ಸ್ ಆಫ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



