ಸಂಡೂರು ಮೀಸಲು ಅರಣ್ಯ ಭೂಮಿ ಅಕ್ರಮ ಖಾತೆ ಬದಲಾವಣೆ ಪ್ರಕರಣ: CBI ಅಥವಾ SIT ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ

ಬಳ್ಳಾರಿ: ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 1,096.79 ಎಕರೆ ಮೌಲ್ಯಯುತ ಮೀಸಲು ಅರಣ್ಯ (Reserved Forest) ಭೂಮಿಯನ್ನು ಅಕ್ರಮವಾಗಿ ‘ಸರ್ಕಾರಿ ಬಿ-ಖರಾಬು’ ಎಂದು ಖಾತೆ ಬದಲಾಯಿಸಿರುವ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಅಥವಾ CBI ತನಿಖೆಗೆ ವಹಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಈ ಕುರಿತು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಹಗರಣದ ವಿವರ ಹಾಗೂ ಆರೋಪಗಳು:
ಸರ್ವೇ ನಂಬರ್‌ಗಳು: ಸೋಮಲಾಪುರ ಗ್ರಾಮದ ಸರ್ವೇ ನಂಬರ್ 165/A, 165/B, 177/C ಹಾಗೂ 1/B ವ್ಯಾಪ್ತಿಯ ಒಟ್ಟು 1,096.79 ಎಕರೆ ಮೀಸಲು ಅರಣ್ಯ ಭೂಮಿಯು ಕಂದಾಯ ದಾಖಲೆಗಳಲ್ಲಿ ಅರಣ್ಯವೆಂದು ನಮೂದಾಗಿದ್ದರೂ, ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ‘ಸರ್ಕಾರಿ ಬಿ-ಖರಾಬು’ ಎಂದು ಅಕ್ರಮವಾಗಿ ಬದಲಾಯಿಸಲಾಗಿದೆ.
ಕಾಯ್ದೆಗಳ ಉಲ್ಲಂಘನೆ: ಈ ಕೃತ್ಯವು ಭಾರತೀಯ ಅರಣ್ಯ ಕಾಯ್ದೆ 1927 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ಅಧಿಕಾರಿಗಳು ಹಾಗೂ ಪ್ರಭಾವಿಗಳ ನೇರ ಭಾಗೀದಾರಿಕೆ:
ಈ ಬೃಹತ್ ಭೂ ಹಗರಣದಲ್ಲಿ ಬಳ್ಳಾರಿ ಜಿಲ್ಲೆಯ ಹಿಂದಿನ ಉಪವಿಭಾಗಾಧಿಕಾರಿ (AC), ಜಿಲ್ಲಾಧಿಕಾರಿ (DC), ಸಂಡೂರು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯ RFO, ACF ಮತ್ತು DCF ಅಧಿಕಾರಿಗಳ ನೇರ ಭಾಗೀದಾರಿಕೆಯಿದೆ. ಅಲ್ಲದೆ, ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆಯೊಂದಿಗೆ ರಕ್ಷಕರೇ ಭಕ್ಷಕರಾಗಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಅತ್ಯಂತ ದೊಡ್ಡ ಭೂ ಹಗರಣಗಳಲ್ಲಿ ಒಂದಾದ ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ತಕ್ಷಣವೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (SIT) ಅಥವಾ CBI ತನಿಖೆಗೆ ಆದೇಶಿಸಬೇಕೆಂದು ದೂರುದಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



