ಬ್ಯಾಡಗಿ: ಎಪಿಎಂಸಿ ಮಾರುಕಟ್ಟೆಗೆ ಶ್ರಾವಣದಲ್ಲೇ ಆಗಮಿಸಿದ ಹೊಸ ಮೆಣಸಿನಕಾಯಿ – ಕ್ವಿಂಟಾಲ್‌ಗೆ ₹50,669 ಸಾರ್ವಕಾಲಿಕ ಉತ್ತಮ ಬೆಲೆ

ಬ್ಯಾಡಗಿ: ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಬೇಗನೆ ಹೊಸ ಮೆಣಸಿನಕಾಯಿ ಆಗಮನವಾಗಿದೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯ ನಂತರ ಮಾರುಕಟ್ಟೆಗೆ ಹೊಸ ಬೆಳೆ ಬರುತ್ತಿತ್ತು. ಆದರೆ ಈ ಬಾರಿ ಶ್ರಾವಣ ಮಾಸದಲ್ಲೇ ಹೊಸ ಮೆಣಸಿನಕಾಯಿ ಆವಕವಾಗಿದ್ದು, ವರ್ತಕರು, ಕೂಲಿ ಕಾರ್ಮಿಕರು ಹಾಗೂ ಎಪಿಎಂಸಿ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.
ಆರಂಭದಲ್ಲಿ ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿ ರೈತರು ಹಾಗೂ ವರ್ತಕರು ತೀವ್ರ ಚಿಂತೆಯಲ್ಲಿದ್ದರು. ಮಳೆಯಾಗದ ಕಾರಣ ಮೆಣಸಿನಕಾಯಿ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ ಇತ್ತೀಚೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪುತ್ತಿದ್ದಂತೆ ಮೆಣಸಿನಕಾಯಿ ದರದಲ್ಲಿ ಸ್ವಲ್ಪ ಮಟ್ಟದ ಕುಸಿತ ಕಂಡುಬಂದು ಇದೀಗ ಸ್ಥಿರತೆ ಕಾಯ್ದುಕೊಂಡಿದೆ.
ಮಾರುಕಟ್ಟೆ ವಿವರ ಹಾಗೂ ಬಂಪರ್ ಬೆಲೆ:
ಆವಕ: ಮಾರುಕಟ್ಟೆಯ ಎರಡು ಪ್ರಮುಖ ಅಂಗಡಿಗಳಿಗೆ ಬಳ್ಳಾರಿ ಗಡಿ ಭಾಗದ ರೈತರು ಕೊಳವೆ ಬಾವಿ ಆಶ್ರಯದಲ್ಲಿ ಬೆಳೆದ ಒಟ್ಟು 200 ಚೀಲ ‘102 ತಳಿ’ಯ ಹೊಸ ಮೆಣಸಿನಕಾಯಿ ಆವಕವಾಗಿದೆ.
ಇ-ಟೆಂಡರ್ ಬೆಲೆ: ಮಾರುಕಟ್ಟೆಗೆ ಬಂದಿದ್ದ 41 ಚೀಲಗಳ 102 ತಳಿಯ ಮೆಣಸಿನಕಾಯಿ ಲಾಟ್‌ಗೆ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಕ್ವಿಂಟಾಲ್‌ಗೆ ಬರೋಬ್ಬರಿ ₹50,669 ದರ ಲಭಿಸಿದೆ.
”ಉತ್ತಮ ಬಣ್ಣ ಹಾಗೂ ಚೆನ್ನಾಗಿ ಒಣಗಿರುವ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಸದಾ ಉತ್ತಮ ಬೇಡಿಕೆ ಇರುತ್ತದೆ. ಗಣಪತಿ ಹಬ್ಬದ ನಂತರ ಹೊಸ ಬೆಳೆ ಬರಬಹುದು ಎನ್ನಲಾಗಿತ್ತು. ಆದರೆ ರೈತರು ಶ್ರಮಪಟ್ಟು ಶ್ರಾವಣದಲ್ಲೇ ಮಾರುಕಟ್ಟೆಗೆ ತಂದಿದ್ದು, ಅವರಿಗೂ ತಕ್ಕಂತೆ ಸೂಕ್ತ ಹಾಗೂ ಉತ್ತಮ ಬೆಲೆ ಸಿಕ್ಕಿದೆ.”
– ಸುರೇಶ ಮೇಲಗಿರಿ (ಮೆಣಸಿನಕಾಯಿ ಖರೀದಿದಾರರು)
(ಕಮಿಷನ್ ಏಜೆಂಟ್: ಮಹಾದೇವಪ್ಪ ಕೆಂಚನಗೌಡ್ರ)



