ಗೋದಾವರಿ ನದಿಯಲ್ಲಿ ಈಜಲು ಹೋಗಿ ಐವರು ಬಿ.ಟೆಕ್ ವಿದ್ಯಾರ್ಥಿಗಳ ದಾರುಣ ಸಾವು

ಪೊಲವರಂ (ಆಂಧ್ರಪ್ರದೇಶ): ದೈವದರ್ಶನ ಮುಗಿಸಿ ಸಂಭ್ರಮದಿಂದ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಗೋದಾವರಿ ನದಿಯ ಪಾಲಾದ ಭೀಕರ ಘಟನೆ ಶನಿವಾರ ಸಂಭವಿಸಿದೆ. ನದಿಯಲ್ಲಿ ಈಜಲು ಹೋದ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಗಡಿಭಾಗದ ಪೊಲವರಂ ಜಿಲ್ಲೆಯ ಪುರುಷೋತ್ತಮಪಟ್ನಂ ರೇವು ಬಳಿಯ ಗೋದಾವರಿ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಮದನಪಲ್ಲಿಯ ಎಸ್‌ಆರ್‌ಎಂ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಏಳು ವಿದ್ಯಾರ್ಥಿಗಳ ತಂಡವು ಕಾರಿನಲ್ಲಿ ಪ್ರವಾಸಕ್ಕೆ ಬಂದಿತ್ತು.
ಮೃತಪಟ್ಟ ವಿದ್ಯಾರ್ಥಿಗಳನ್ನು ಪಿ. ಸತೀಶ್ ಕುಮಾರ್, ಜಿ. ತೇಜ, ನವ್ ದೀಪ್, ಪಿ. ಅಭಿರಾಮ್ ಮತ್ತು ಶ್ರೀಕಾರ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಭದ್ರಾಚಲಂ ಮತ್ತು ಮದನಪಲ್ಲಿ ಪ್ರದೇಶದವರು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ತಂಡವು ದೇವರ ದರ್ಶನ ಮುಗಿಸಿಕೊಂಡು ವಾಪಸ್ಸಾಗುವಾಗ ಗೋದಾವರಿ ನದಿಯ ದಂಡೆಯ ಬಳಿ ಕಾರನ್ನು ನಿಲ್ಲಿಸಿತ್ತು. ಬಳಿಕ ಎಲ್ಲರೂ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿದ ಐವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯ ಆರಂಭಿಸಿವೆ. ಸದ್ಯಕ್ಕೆ ಮೂವರು ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಇಬ್ಬರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪತ್ತೆಯಾದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾಚಲಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಒಟ್ಟಿಗೆ ಓದುತ್ತಿದ್ದ ಸ್ನೇಹಿತರಲ್ಲಿ ಐವರು ಅಕಾಲಿಕ ಮರಣಕ್ಕೀಡಾಗಿರುವುದು ಅವರ ಕುಟುಂಬದವರಲ್ಲಿ ಮತ್ತು ಕಾಲೇಜು ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.



