ಶ್ರೀಶೈಲ ದರ್ಶನ ಮುಗಿಸಿ ಮರಳುವಾಗ ಭೀಕರ ಅಪಘಾತ: ಚಿಕ್ಕೋಡಿ ಮೂಲದ ಮೂವರು ಭಕ್ತರ ಸಾವು!

ಆಂಧ್ರಪ್ರದೇಶ: ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಪುಣ್ಯಕ್ಷೇತ್ರ ಶ್ರೀಶೈಲದಿಂದ ಮರಳುತ್ತಿದ್ದ ಭಕ್ತರ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಮವಾರ ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಿಂದ ಒಟ್ಟು 14 ಭಕ್ತರು ಕ್ರೂಸರ್ ವಾಹನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ಸಂಭ್ರಮದಿಂದ ಮರಳುವ ವೇಳೆ ವಿಧಿ ಆಟವಾಡಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ ನಿವಾಸಿಗಳಾದ ಈ ಕೆಳಗಿನಂತೆ ಗುರುತಿಸಲಾಗಿದೆ:
ಅಜಿತ್ ಸಾತವಾರ (28) ಗೌರವ್ (40)ಅಲಕಾ ಶಿಂಧೆ (60).
ಕರ್ನೂಲ್ನಿಂದ ನಲ್ಗೊಂಡಕ್ಕೆ ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿಯು ಎದುರಿನಿಂದ ಬಂದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ನಜ್ಜುಗುಜ್ಜಾಗಿದ್ದು, ಕಿರುಚಾಟ ಮುಗಿಲು ಮುಟ್ಟಿತ್ತು.
ಈ ಅಪಘಾತದಲ್ಲಿ ಇತರ ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ನಂದ್ಯಾಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರ್ಕಪುರಂನ ವೃತ್ತ ನಿರೀಕ್ಷಕ ಪಿ. ಸುಬ್ಬಾರಾವ್ ಮಾಹಿತಿ ನೀಡಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಎಕ್ಸಂಬಾ ಪಟ್ಟಣದಲ್ಲಿ ಶೋಕದ ಛಾಯೆ ಆವರಿಸಿದೆ.



