ಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬೆಳಗಾವಿಯಲ್ಲಿ ಆಲಿಕಲ್ಲು ಮಳೆಯ ಆರ್ಭಟ: ಪಾಳು ಬಿದ್ದ ಮನೆಯ ಗೋಡೆ ಕುಸಿದು ಮಹಿಳೆ ಸಾವು; ಪತಿ ಪ್ರಾಣಾಪಾಯದಿಂದ ಪಾರು!

Share News

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಆಲಿಕಲ್ಲು ಮಳೆ ಒಂದು ಬಡ ಕುಟುಂಬದ ಪಾಲಿಗೆ ಮೃತ್ಯುವಾಗಿ ಬಂದೆರಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಪಾಳು ಬಿದ್ದ ಮನೆಯ ಆಸರೆ ಪಡೆದಿದ್ದ ದಂಪತಿಗಳ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ, ಪತ್ನಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಪರ್ವಿನ್ ಬೇಪಾರಿ (34) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಪತ್ನಿ ಪರ್ವಿನ್ ಸಾವನ್ನಪ್ಪಿದ್ದರೆ, ಪತಿ ಶರೀಫ್ ಬೇಪಾರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ದಂಪತಿಗಳಿಬ್ಬರು ಕೋಳಿಗಳನ್ನು ಮಾರಾಟ ಮಾಡುವ ಸಲುವಾಗಿ ತಮ್ಮ ಬೈಕ್ ಮೇಲೆ ಹೊಸೂರು ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಲಾರಂಭಿಸಿತು. ಮಳೆಯ ಆರ್ಭಟ ಹೆಚ್ಚಾದ ಕಾರಣ, ರಕ್ಷಣೆ ಪಡೆಯಲು ರಸ್ತೆ ಪಕ್ಕದಲ್ಲಿದ್ದ ಹಳೆಯ ಪಾಳು ಬಿದ್ದ ಮನೆಯೊಂದರ ಗೋಡೆಯ ಕೆಳಗೆ ಇಬ್ಬರೂ ನಿಂತಿದ್ದರು.

ಮಳೆಯ ಅಬ್ಬರಕ್ಕೆ ಆ ಹಳೆಯ ಮನೆಯ ಗೋಡೆ ಸಂಪೂರ್ಣವಾಗಿ ನೆನೆದು ಏಕಾಏಕಿ ದಂಪತಿಗಳ ಮೇಲೆ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಪರ್ವಿನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತಿ ಶರೀಫ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಈಗ ಆಧಾರಸ್ತಂಭವಾಗಿದ್ದ ಮಹಿಳೆಯ ಸಾವು ದೊಡ್ಡ ಆಘಾತ ನೀಡಿದೆ. ಮೃತರ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!