ಮಾಜಿ ಡ್ರೈವರ್ ಮನೆಯಲ್ಲಿ ₹20 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ: ಪೊಲೀಸರ ರೇಡ್ಗೆ ಇಡೀ ದೇಶವೇ ಶಾಕ್!

ಕೋಲ್ಕತ್ತಾ: ಸಾರಿಗೆ ಇಲಾಖೆಯ ನಿವೃತ್ತ ಬಸ್ ಚಾಲಕನೊಬ್ಬನ ಮನೆಯ ಮೇಲೆ ನಡೆದ ಭರ್ಜರಿ ಪೊಲೀಸ್ ರೇಡ್ನಲ್ಲಿ ಕೋಟ್ಯಂತರ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನದ ಬಿಸ್ಕತ್ಗಳು ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ದೇವಚಾ ಗ್ರಾಮದಲ್ಲಿ ನಡೆದಿದೆ.
ದಾಳಿ ನಡೆಸಿದ ಪೊಲೀಸರು ಮನೆಯಲ್ಲಿದ್ದ ನೋಟಿನ ಕಂತೆಗಳನ್ನು ಕಂಡು ಬೆಚ್ಚಿಬಿದ್ದಿದ್ದು, ನಗದು ಎಣಿಕೆ ಮಾಡಲು ಬ್ಯಾಂಕ್ನಿಂದ ಬರೋಬ್ಬರಿ 5 ನೋಟು ಎಣಿಕೆ ಯಂತ್ರಗಳನ್ನು ತರಿಸಲಾಗಿತ್ತು.
ಜಪ್ತಿಯಾದ ಆಸ್ತಿ ವಿವರ:
ನಗದು ಹಣ: ಸುಮಾರು 20 ಕೋಟಿ ರೂಪಾಯಿಗೂ ಅಧಿಕ.
ಚಿನ್ನ: 15 ಕೆಜಿ ತೂಕದ ಚಿನ್ನದ ಬಿಸ್ಕತ್ಗಳು.
ಈ ಮನೆ ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದ ಮಿನಾರ್ ಮೊಂಡಲ್ ಎಂಬ ಚಾಲಕನಿಗೆ ಸೇರಿದ್ದಾಗಿದೆ. ನಿವೃತ್ತಿಯ ನಂತರ ಮಿನಾರ್, ಈ ಭಾಗದ ಕುಖ್ಯಾತ ಕಲ್ಲು ಮತ್ತು ಮರಳು ಉದ್ಯಮಿ ಟುಲು ಮೊಂಡಲ್ (ಮೊಹಮ್ಮದ್ ನಜಿಬುದ್ದೀನ್) ಅವರ ಜೊತೆ ಕೈಜೋಡಿಸಿದ್ದರು. ಟುಲು ಮೊಂಡಲ್ ಅವರ ಕ್ವಾರಿ ವ್ಯವಹಾರ ಹಾಗೂ ಅಕ್ರಮ ಸಾರಿಗೆಯಿಂದ ಬರುವ ಕೋಟ್ಯಂತರ ರೂಪಾಯಿ ಕಪ್ಪುಹಣವನ್ನು ಈ ಮಾಜಿ ಚಾಲಕ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಉದ್ಯಮಿ ಟುಲು ಮೊಂಡಲ್ 2024 ರಲ್ಲಿ ತನ್ನ ಮಗಳ ವಿವಾಹವನ್ನು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಿದ್ದರು. ಬಾಲಿವುಡ್ ನಟರಾದ ಅರ್ಬಾಜ್ ಖಾನ್ ಹಾಗೂ ಜರೀನ್ ಖಾನ್ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದ ಆ ಮದುವೆಯ ವಿಪರೀತ ಆಡಂಬರಕ್ಕೆ ಈ ಕಪ್ಪುಹಣವೇ ಮೂಲ ಎಂಬುದು ಈಗ ಬೆಳಕಿಗೆ ಬಂದಿದೆ.
ಉದ್ಯಮಿ ಟುಲು ಮೊಂಡಲ್ ಈ ಹಿಂದೆ ತೃಣಮೂಲ ಕಾಂಗ್ರೆಸ್ನ ಬಂಡಾಯ ನಾಯಕ ಅನುಬ್ರತಾ ಮೊಂಡಲ್ ಅವರ ನಿಕಟವರ್ತಿಯಾಗಿದ್ದರಿಂದ, ಈ ದಾಳಿ ರಾಜ್ಯ ರಾಜಕೀಯದಲ್ಲಿಯೂ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಾಚರಣೆಯನ್ನು ಮೆಚ್ಚಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಅಕ್ರಮ ಮಾಫಿಯಾ ವಿರುದ್ಧ ಸರ್ಕಾರದ ‘ಶೂನ್ಯ ಸಹಿಷ್ಣುತೆ ನೀತಿ’ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಪೊಲೀಸರು ಮಾಜಿ ಚಾಲಕ ಮಿನಾರ್ ಮೊಂಡಲ್ ಹಾಗೂ ಆತನ ಮಗನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



