ಬಸರಕೋಡದ ಪವಾಡ ಬಸವೇಶ್ವರ ದೇಗುಲದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಗುಜರಾತ್ ಮೂಲದ ಮೂವರು ಮೂರ್ತಿಚೋರರ ಬಂಧನ!

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪ್ರಸಿದ್ಧ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಾಲಯದಲ್ಲಿ ನಡೆದಿದ್ದ ಭಾರಿ ಮೊತ್ತದ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಮೂವರು ಖತರ್ನಾಕ್ ಮೂರ್ತಿಚೋರರನ್ನು ಬಂಧಿಸಲಾಗಿದೆ.
₹51 ಲಕ್ಷ ಮೌಲ್ಯದ ಬೆಳ್ಳಿ ವಶ:
ಬಂಧಿತ ಆರೋಪಿಗಳಿಂದ ಸುಮಾರು ₹51 ಲಕ್ಷ ಮೌಲ್ಯದ 32 ಕೆ.ಜಿ ಬೆಳ್ಳಿ ಆಭರಣ ಹಾಗೂ ಮೂರ್ತಿಗಳಿಗೆ ಸಂಬಂಧಿಸಿದಂತೆ, 23 ಕೆ.ಜಿ ತೂಕದ ಕರಗಿಸಿದ ಬೆಳ್ಳಿ ಗಟ್ಟಿ, 4 ಕೆ.ಜಿ ತೂಕದ ಮೂರ್ತಿಯ ಕತ್ತರಿಸಿದ ತುಂಡುಗಳು, ₹67,000 ನಗದು ಹಣ ಹಾಗೂ ಕೃತ್ಯ ಎಸಗಲು ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸುಮಾರು 32 ಕೆ.ಜಿ ತೂಕದ ಬೆಳ್ಳಿ ಮೂರ್ತಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳ ಜಾಲವನ್ನು ಜಾಲಾಡಿದ ಪೊಲೀಸರು, ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ



