ಬೆಂಗಳೂರು ಸಂಚಾರ ಸುಧಾರಣೆಗೆ AI ತಂತ್ರಜ್ಞಾನ: ಐಟಿಎಂಎಸ್ (ITMS) ವ್ಯವಸ್ಥೆ ಬಲಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಸಲಾಯಿತು. ತಂತ್ರಜ್ಞಾನ ಆಧಾರಿತ ನೂತನ ಕ್ರಮಗಳ ಮೂಲಕ ನಗರದ ಸಂಚಾರ ನಿರ್ವಹಣೆಯನ್ನು ಕ್ಷಿಪ್ರ ಮತ್ತು ಪರಿಣಾಮಕಾರಿಯಾಗಿ ರೂಪಿಸುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಸಂಸಾರ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (AI) ಬಳಕೆ:
ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕೃತಕ ಬುದ್ಧಿಮತ್ತೆ (AI), ದತ್ತಾಂಶ ವಿಶ್ಲೇಷಣೆ (Data Analytics), ವಾಹನಗಳ ಸಂಚಾರ ಮಾದರಿಗಳು ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ CCTV ಕ್ಯಾಮೆರಾ ಮೂಲಸೌಕರ್ಯಗಳನ್ನು ಅತ್ಯಂತ ದಕ್ಷವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ಉದ್ದೇಶಗಳು:
AI ಆಧಾರಿತ ಮುನ್ಸೂಚನೆ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸಂಚಾರ ದಟ್ಟಣೆಯನ್ನು ಮುಂಚಿತವಾಗಿಯೇ ಅಂದಾಜಿಸುವುದು ಹಾಗೂ ಅಗತ್ಯಕ್ಕೆ ತಕ್ಕಂತೆ ಮಾರ್ಗ ಬದಲಾವಣೆ (Rerouting) ಮಾಡುವುದು.
ಜಂಕ್ಷನ್‌ಗಳ ಕಾರ್ಯಕ್ಷಮತೆ ವಿಶ್ಲೇಷಣೆ: ಪ್ರಮುಖ ಜಂಕ್ಷನ್‌ಗಳಲ್ಲಿ ದತ್ತಾಂಶ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಸಂಚಾರ ಅಡಚಣೆಗಳನ್ನು ಗಂಭೀರ ಸ್ವರೂಪ ಪಡೆಯುವ ಮುನ್ನವೇ ಗುರುತಿಸಿ ನಿವಾರಿಸುವುದು.
ದಕ್ಷ ಸಂಚಾರ ವ್ಯವಸ್ಥೆ: ಹೆಚ್ಚಿನ ಸಂಖ್ಯೆಯ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಚಲಿಸುವಂತೆ ವಾತಾವರಣ ನಿರ್ಮಿಸುವುದು.
ಬೆಂಗಳೂರು ನಗರ ಸಂಚಾರ ವ್ಯವಸ್ಥೆಯಲ್ಲಿ ಸುಸ್ಥಿರ ಹಾಗೂ ದೀರ್ಘಕಾಲೀನ ಸುಧಾರಣೆಗಳನ್ನು ತರುವ ‘ನಗರ ಸಂಚಾರ ಮಿಷನ್’ನ ಪ್ರಮುಖ ಆಧಾರಸ್ತಂಭಗಳಲ್ಲಿ ಈ ತಂತ್ರಜ್ಞಾನ ಆಧಾರಿತ ನಾವೀನ್ಯತೆಯೂ ಒಂದಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ದತ್ತಾಂಶದ ಪರಿಣಾಮಕಾರಿ ಬಳಕೆಯ ಮೂಲಕ ಬೆಂಗಳೂರಿನ ಸಂಚಾರವನ್ನು ಮತ್ತಷ್ಟು ಸುಗಮ, ದಕ್ಷ ಹಾಗೂ ಜನಸ್ನೇಹಿಯಾಗಿಸಲು ಶ್ರಮಿಸಲಾಗುತ್ತಿದೆ.



