ಸಂಪಾಜೆಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು – ಅತ್ತೆ, ಮಾವ, ನಾದಿನಿ ವಿರುದ್ಧ ಕೊಲೆ ದೂರು ದಾಖಲು

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಫಾತಿಮಾತ್ ನಿಶಾನಾ ಎಂಬ ವಿವಾಹಿತ ಮಹಿಳೆ ತಮ್ಮ ಪತಿಯ ಮನೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ಮೂಲದ ಫಾತಿಮಾತ್ ನಿಶಾನಾ ಅವರಿಗೆ ಮದುವೆಯಾದಾಗಿನಿಂದಲೂ ಅತ್ತೆ, ಮಾವ ಹಾಗೂ ನಾದಿನಿಯಿಂದ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಗಂಡನ ಜೊತೆ ಫೋನ್‌ನಲ್ಲಿ ಸಂಭಾಷಣೆ ನಡೆಸುವಾಗಲೂ ಮಾವ ಅಲವಿ ಬಲವಂತವಾಗಿ ಫೋನ್ ಕಸಿಯುತ್ತಿದ್ದರೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗಳ ನಿಗೂಢ ಸಾವಿನ ಕುರಿತು ಮೃತಳ ತಾಯಿ ಜುಬೈದಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾವ ಅಲವಿ, ಅತ್ತೆ ಮತ್ತು ನಾದಿನಿ ಸೇರಿ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾಯಿಯ ದೂರಿನ ಆಧಾರದ ಮೇಲೆ ಸುಳ್ಯ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85 (ಗೃಹಹಿಂಸೆ) ಹಾಗೂ ಕಲಂ 103(1) (ಕೊಲೆ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆಯ ನಂತರವಷ್ಟೇ ಘಟನೆಯ ನಿಜವಾದ ಸತ್ಯಾಸತ್ಯತೆ ಹೊರಬರಬೇಕಿದೆ.



