ಪೂಜೆ ಕುಡಿಕೆ ಹೆಸರಲ್ಲಿ ಗರ್ಭಿಣಿ ದಂಪತಿಗೆ ಮೋಸ – ₹1.20 ಲಕ್ಷ ಮೌಲ್ಯದ ಚಿನ್ನದೊಂದಿಗೆ ಬುಡಬುಡಿಕೆ ದಾಸಯ್ಯ ಪರಾರಿ

ಬೆಂಗಳೂರು: ಮನೆಯಲ್ಲಿ ಸಾವಿನ ಕಂಟಕವಿದೆ ಎಂದು ಹೆದರಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಶಾಕಿಂಗ್ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಬೆಳಕಿಗೆ ಬಂದಿದೆ.
ಹೆಗ್ಗಡದೇವನಪುರದ ನಿವಾಸಿ ಮೋಹನ್ ಹಾಗೂ ಅವರ 8 ತಿಂಗಳ ಗರ್ಭಿಣಿ ಪತ್ನಿ ಉಷಾ ಅವರ ಮನೆಗೆ ಬಂದ ಬುಡುಬುಡುಕೆ ವೇಷಧಾರಿ ಖದೀಮನೊಬ್ಬ, “ನಿಮ್ಮ ಮನೆಗೆ ದೊಡ್ಡ ದೋಷವಿದೆ, ಶೀಘ್ರದಲ್ಲೇ ಸಾವಿನ ಕಂಟಕ ಎದುರಾಗಲಿದೆ” ಎಂದು ಹೆದರಿಸಿದ್ದಾನೆ. ಇದರಿಂದ ಆತಂಕಗೊಂಡ ದಂಪತಿಗೆ, ಉಚಿತವಾಗಿ ಪೂಜೆ ಮಾಡಿ ದೋಷ ನಿವಾರಿಸುವುದಾಗಿ ನಂಬಿಸಿ ಮನೆಗೆ ಪ್ರವೇಶಿಸಿದ್ದಾನೆ.
ಮನೆಯೊಳಗೆ ತಾನು ತಂದಿದ್ದ ಮಣ್ಣಿನ ಕುಡಿಕೆಯನ್ನು ಇಟ್ಟು, ದೋಷ ನಿವಾರಣೆಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅದರಲ್ಲಿ ಹಾಕುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ದಂಪತಿ ತಮ್ಮ ಕಿವಿ ಓಲೆ, ಮಾಟಿ ಹಾಗೂ ಉಂಗುರಗಳನ್ನು ಕುಡಿಕೆಗೆ ಹಾಕಿದ್ದಾರೆ. ಬಳಿಕ ದಂಪತಿಗೆ ನೀರು ತರಲು ಒಳಗಡೆ ಕಳುಹಿಸಿದ ಖದೀಮ, ಕ್ಷಣಾರ್ಧದಲ್ಲಿ ಚಿನ್ನವಿದ್ದ ಕುಡಿಕೆಯನ್ನು ಬದಲಾಯಿಸಿ ನಕಲಿ ಕುಡಿಕೆಯನ್ನಿಟ್ಟಿದ್ದಾನೆ.
ನಂತರ ದಂಪತಿಗೆ ಒಂದು ವಸ್ತುವನ್ನು ನೀಡಿ, ಅದನ್ನು ಕೆರೆಗೆ ಎಸೆದು ಬರುವಂತೆ ಹೇಳಿ ಕಳುಹಿಸಿದ ಕಳ್ಳಸ್ವಾಮಿ, ಬರೋಬ್ಬರಿ ₹1.20 ಲಕ್ಷ ಮೌಲ್ಯದ ಚಿನ್ನಾಭರಣಗಳೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ.
ದಂಪತಿ ವಾಪಸ್ ಬಂದು ನೋಡಿದಾಗ ಕುಡಿಕೆಯಲ್ಲಿ ಚಿನ್ನದ ಬದಲು ಕಲ್ಲು-ಮಣ್ಣು ಕಂಡುಬಂದಿದ್ದು, ತಾವೇ ಮೋಸ ಹೋಗಿರುವುದು ಅರಿವಾಗಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಖದೀಮನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.



