ಐಸಿಸ್ಗೆ ಕರ್ನಾಟಕ ಟಾರ್ಗೆಟ್? – ಯುವಕರ ಬ್ರೈನ್ ವಾಶ್, ಫಂಡಿಂಗ್ ಜಾಲ ಭೇದಿಸಲು ಬೆಂಗಳೂರು ಸೇರಿ 8 ಕಡೆ ಇಡಿ ಮಿಂಚಿನ ದಾಳಿ

ಬೆಂಗಳೂರು: ನಿಷೇಧಿತ ಉಗ್ರ ಸಂಘಟನೆ ‘ಐಸಿಸ್’ಗೆ ರಾಜ್ಯದ ಯುವಕರನ್ನು ಸೆಳೆಯಲು ನಡೆದಿದ್ದ ಬೃಹತ್ ಸಂಚಿನ ಅಕ್ರಮ ಹಣಕಾಸು ವಹಿವಾಟಿನ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು, ರಾಜಧಾನಿ ಬೆಂಗಳೂರು ಸೇರಿದಂತೆ ಬರೋಬ್ಬರಿ ಎಂಟು ಕಡೆಗಳಲ್ಲಿ ಮಿಂಚಿನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಧರ್ಮ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳ ಹೆಸರಿನಲ್ಲಿ ದೇಶದ ಯುವಕರನ್ನು ದಾರಿ ತಪ್ಪಿಸಿ, ಬ್ರೈನ್ ವಾಶ್ ಮಾಡಿ ಟರ್ಕಿ ಮಾರ್ಗವಾಗಿ ಸಿರಿಯಾಗೆ ಕಳುಹಿಸಲು ಬೃಹತ್ ಜಾಲ ಹೆಣೆಯಲಾಗಿತ್ತು. ಈ ಅಕ್ರಮ ಕೃತ್ಯ ಹಾಗೂ ಪ್ರಯಾಣಕ್ಕೆ ಕೋಟ್ಯಂತರ ರೂಪಾಯಿ ಫಂಡಿಂಗ್ ನಡೆದಿರುವ ಶಾಕಿಂಗ್ ವಿಚಾರ ಈಗ ತನಿಖೆಯಲ್ಲಿ ಬಯಲಾಗಿದೆ.
ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಐಸಿಸ್ ನೇಮಕಾತಿ ಜಾಲಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಐವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ಈ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದ್ದ ಹಣಕಾಸಿನ ಅಕ್ರಮ ವಹಿವಾಟನ್ನು ಗಂಭೀರವಾಗಿ ಪರಿಗಣಿಸಿರುವ ಇಡಿ, ಕಪ್ಪು ಹಣ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕಿಳಿದಿದೆ.
ಯುವಕರನ್ನು ವಿದೇಶಕ್ಕೆ ರವಾನಿಸುವ ಈ ಅಕ್ರಮ ಜಾಲಕ್ಕಾಗಿ ವಿವಿಧ ಟ್ರಸ್ಟ್ಗಳು ಹಾಗೂ ವೈಯಕ್ತಿಕ ಖಾತೆಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸಿ ವರ್ಗಾವಣೆ ಮಾಡಲಾಗಿತ್ತು. ಪ್ರಸ್ತುತ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಹಣಕಾಸಿನ ನೆರವು ನೀಡಿದ ಟ್ರಸ್ಟ್ಗಳು ಮತ್ತು ವ್ಯಕ್ತಿಗಳಿಗೆ ಸೇರಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಉಗ್ರ ಸಂಘಟನೆಗೆ ಯುವಕರನ್ನು ತಳ್ಳಲು ಹೆಣೆದಿದ್ದ ಈ ಜಾಲಕ್ಕೆ ಅಕ್ರಮ ಹಣ ಹರಿದು ಬಂದ ಹಾದಿ ಯಾವುದು ಮತ್ತು ಇದರಲ್ಲಿ ಇನ್ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಇಡಿ ನಡೆಸುತ್ತಿರುವ ತೀವ್ರ ತನಿಖೆಯಿಂದ ಹೊರಬರಬೇಕಿದೆ.



