ನಗದು ವ್ಯವಹಾರಕ್ಕೆ ಬ್ರೇಕ್: ಇಂದಿನಿಂದ ಹೊಸ ಆರ್ಥಿಕ ನಿಯಮ ಜಾರಿ; ಉಲ್ಲಂಘಿಸಿದರೆ ಭಾರೀ ದಂಡ!

ಬೆಂಗಳೂರು: ದೇಶಾದ್ಯಂತ ಇಂದಿನಿಂದ (ಏಪ್ರಿಲ್ 1) ನೂತನ 2026-27ರ ಆರ್ಥಿಕ ವರ್ಷ ಆರಂಭಗೊಂಡಿದ್ದು, ನಗದು ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಬದಲಾವಣೆಗಳನ್ನು ಜಾರಿಗೆ ತಂದಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತರಲಾದ ಈ ನಿಯಮಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರು ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ.
ಹೊಸ ನಿಯಮದ ಪ್ರಕಾರ, ಯಾವುದೇ ವ್ಯಕ್ತಿಯಿಂದ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ಒಂದು ವೇಳೆ ಈ ಮಿತಿ ಮೀರಿದಲ್ಲಿ, ಸ್ವೀಕರಿಸಿದ ಪೂರ್ಣ ಮೊತ್ತವನ್ನೇ ದಂಡದ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಎಲ್ಲಾ ದೊಡ್ಡ ಮಟ್ಟದ ವ್ಯವಹಾರಗಳು ಕಡ್ಡಾಯವಾಗಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ಮಾರ್ಗದಲ್ಲೇ ನಡೆಯಬೇಕಿದೆ.
ಸಾಮಾನ್ಯವಾಗಿ ಜನರು ಪಡೆಯುವ ಕೈಸಾಲದ ವಿಚಾರದಲ್ಲೂ ನಿಯಮ ಬಿಗಿಗೊಳಿಸಲಾಗಿದೆ. 20 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸಾಲ ಪಡೆಯುವಂತಿಲ್ಲ ಮತ್ತು ಹಿಂದಿರುಗಿಸುವಂತಿಲ್ಲ. ಮನೆ ಬಾಡಿಗೆ, ಲೀಸ್ ಅಥವಾ ಆಸ್ತಿ ಖರೀದಿ ವ್ಯವಹಾರಗಳಿಗೂ ಇದೇ ನಿಯಮ ಅನ್ವಯಿಸಲಿದ್ದು, 20 ಸಾವಿರ ಮೀರಿದ ಹಣವನ್ನು ಬ್ಯಾಂಕ್ ಮೂಲಕವೇ ವರ್ಗಾಯಿಸಬೇಕು.
ಪಾನ್ ಕಾರ್ಡ್ ಕಡ್ಡಾಯ: ಹೋಟೆಲ್‌ಗಳಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಬಿಲ್ ಪಾವತಿಸುವಾಗ ಗ್ರಾಹಕರು ತಮ್ಮ ಪಾನ್ (PAN) ಕಾರ್ಡ್ ವಿವರ ನೀಡುವುದು ಕಡ್ಡಾಯ.
ಬ್ಯಾಂಕ್ ಠೇವಣಿ: ಪಾನ್ ಕಾರ್ಡ್ ಇರುವವರು ವರ್ಷಕ್ಕೆ 10 ಲಕ್ಷ ಹಾಗೂ ಇಲ್ಲದವರು 5 ಲಕ್ಷ ರೂಪಾಯಿವರೆಗೆ ಮಾತ್ರ ಠೇವಣಿ ಇಡಬಹುದು. ಚಾಲ್ತಿ ಖಾತೆದಾರರಿಗೆ (Current Account) 50 ಲಕ್ಷ ರೂಪಾಯಿ ಮಿತಿ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಗೆ ಸ್ಪಷ್ಟನೆ ನೀಡುವುದು ಅಗತ್ಯ.
ಡಿಜಿಟಲ್ ವ್ಯವಹಾರಗಳಲ್ಲೂ ಬದಲಾವಣೆ ತರಲಾಗಿದ್ದು, ಯುಪಿಐ (UPI) ಮೂಲಕ ಹಣ ವಿತ್‌ಡ್ರಾ ಮಾಡಿದರೆ ಪ್ರತಿ ಬಾರಿ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಎಟಿಎಂನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ತೆಗೆದರೆ ಪ್ರತಿ ಬಾರಿಗೆ 25 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಅನಗತ್ಯ ಮತ್ತು ಅಕ್ರಮ ಹಣದ ಓಡಾಟಕ್ಕೆ ತಡೆ ಹಾಕಲು ಕೇಂದ್ರ ಸರ್ಕಾರ ಈ ಮಹತ್ವದ ಕ್ರಮಗಳನ್ನು ಇಂದಿನಿಂದಲೇ ಜಾರಿಗೆ ತಂದಿದ್ದು, ಸಾರ್ವಜನಿಕರು ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.



