ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿ

ಬೆಳಗಾವಿ: ಸಿಲಿಂಡರ್ ಅಭಾವಕ್ಕೆ ಜನರ ಆಕ್ರೋಶ; ನಡುರಸ್ತೆಯಲ್ಲೇ ಖಾಲಿ ಸಿಲಿಂಡರ್ ಇಟ್ಟು ಪ್ರತಿಭಟನೆ

Share News

ಬೆಳಗಾವಿ: ಅಂತರಾಷ್ಟ್ರೀಯ ಮಟ್ಟದ ಇರಾನ್-ಇಸ್ರೇಲ್ ಯುದ್ಧದ ಕರಿನೆರಳು ಈಗ ಗ್ರಾಮೀಣ ಭಾಗದ ಅಡುಗೆಮನೆಗಳಿಗೂ ತಟ್ಟಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ರೊಚ್ಚಿಗೆದ್ದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಎಂ.ಕೆ.ಹುಬ್ಬಳ್ಳಿ ಗ್ರಾಮದ ನಿವಾಸಿಗಳು ಕಳೆದ ಒಂದು ತಿಂಗಳಿನಿಂದ ಸಿಲಿಂಡರ್ ಬುಕ್ ಮಾಡಿದರೂ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗ್ಯಾಸ್ ಏಜೆನ್ಸಿ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಸಾರ್ವಜನಿಕರು, ಇಂದು ನಡುರಸ್ತೆಯಲ್ಲೇ ಖಾಲಿ ಸಿಲಿಂಡರ್‌ಗಳನ್ನು ಸಾಲಾಗಿ ಜೋಡಿಸಿಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಏಜೆನ್ಸಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನಾವು ಪದೇ ಪದೇ ಕಚೇರಿಗೆ ಹೋದರೂ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಬದಲಾಗಿ ಹೆಚ್ಚಿನ ಹಣ ನೀಡುವವರಿಗೆ ಮಾತ್ರ ಗುಟ್ಟಾಗಿ ಸಿಲಿಂಡರ್ ನೀಡಲಾಗುತ್ತಿದೆ. ನಮಗೆ ಮಾತ್ರ ‘ನಾಳೆ ಬಾ’ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.

ಜಾಗತಿಕ ಯುದ್ಧದ ಪರಿಣಾಮವಾಗಿ ಇಂಧನ ಮತ್ತು ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಸಾಮಾನ್ಯ ಜನರ ಬದುಕನ್ನು ಹಸಿಗೆಡಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಅಡುಗೆ ಮಾಡಲು ಸೌದೆಯನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

​ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಿಲಿಂಡರ್ ವಿತರಣೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಗಟ್ಟಿ, ಜನರಿಗೆ ಸುಗಮವಾಗಿ ಗ್ಯಾಸ್ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!