ಪಾದಾಚಾರಿಗಳ ಸುರಕ್ಷತೆಗೆ ಕಠಿಣ ಕ್ರಮ: ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆಗೆ ₹5,000 ವರೆಗೆ ದಂಡ ಹೆಚ್ಚಳಕ್ಕೆ ಮನವಿ

ಬೆಂಗಳೂರು: ನಗರದಲ್ಲಿ ಪಾದಾಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು ಬೆಂಗಳೂರು ನಗರ ಸಂಚಾರ (ಟ್ರಾಫಿಕ್) ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಾರ್ವಜನಿಕರ ‘ನಡೆಯುವ ಹಕ್ಕನ್ನು’ ಗೌರವಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯಂತೆ ನಗರದ ಐದೂ ಪಾಲಿಕೆ ವ್ಯಾಪ್ತಿಯಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
ದಂಡದ ಪ್ರಮಾಣ ಭಾರಿ ಹೆಚ್ಚಳಕ್ಕೆ ಪ್ರಸ್ತಾವನೆ: ಬೀದಿಬದಿ ವ್ಯಾಪಾರಿಗಳಿಂದ ತೆರವುಗೊಳಿಸಲಾದ ಪಾದಾಚಾರಿ ಮಾರ್ಗಗಳಲ್ಲಿ ಬೈಕ್ ಅಥವಾ ಯಾವುದೇ ಮೋಟಾರು ವಾಹನಗಳನ್ನು ಚಲಾಯಿಸುವುದನ್ನು ತಡೆಯಲು, ಹಾಲಿ ಇರುವ ₹500 ದಂಡವನ್ನು ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಕೋರಲಾಗಿದೆ ಎಂದು ಸಚಿವರು ತಿಳಿಸಿದರು.
ಅಪಘಾತವೆಸಗಿದರೆ ಕಠಿಣ ಕಾನೂನು ಕ್ರಮ: ಪಾದಾಚಾರಿ ಮಾರ್ಗದಲ್ಲಿ ವಾಹನ ಸಂಚರಿಸಿ ಅಪಘಾತ ಸಂಭವಿಸಿದರೆ ಚಾಲಕರ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪಾರ್ಕಿಂಗ್ ನಿಯಮಗಳ ಜಾರಿ: ನಗರದ ಪ್ರಮುಖ ರಸ್ತೆಗಳಲ್ಲಿ ‘ಆಲ್ಟರ್ನೇಟ್ ಪಾರ್ಕಿಂಗ್’ (Alternate Parking) ಅಥವಾ ‘ಒನ್-ಸೈಡ್ ಪಾರ್ಕಿಂಗ್’ (One-Side Parking) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಟ್ರಾಫಿಕ್ ಪೊಲೀಸರಿಗೆ ನಿರ್ದೇಶನ ನೀಡಲಾಯಿತು.
ಸಿಗ್ನಲ್ ಹಾಗೂ ಬಸ್ ನಿಲ್ದಾಣಗಳ ನಿಯಂತ್ರಣ: ಸಿಗ್ನಲ್ಗಳ ಬಳಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ಸಂಚಾರ ದಟ್ಟಣೆ ತಡೆಯಲು ಟ್ರಾಫಿಕ್ ಸಿಗ್ನಲ್ನಿಂದ 75 ಮೀಟರ್ ಹಾಗೂ ಜಂಕ್ಷನ್ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳು ಇರದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಸಭೆಯ ನಂತರ ಮಾತನಾಡಿದ ಸಚಿವರು, “ಪಾದಾಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಾಣಗೊಂಡಿವೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ ಮಾತ್ರವೇ ನಗರದಲ್ಲಿ ಸುಗಮ ಸಂಚಾರ ಸಾಧ್ಯ,” ಎಂದು ಪ್ರತಿಪಾದಿಸಿದರು.



