ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ನೆರೆಮನೆಯ ಅಜ್ಜಿ ಭೀಕರ ಕೊಲೆ: ಬೃನ್ನಾಟಕವಾಡಿದ್ದ ಆರೋಪಿ ಕುಂಬಳಗೋಡು ಪೊಲೀಸರ ಬಲೆಗೆ!

ಬೆಂಗಳೂರು (ಕುಂಬಳಗೋಡು): ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲದ ಸುಳಿಗೆ ಸಿಲುಕಿದ್ದ ನರರಾಕ್ಷಸನೊಬ್ಬ ಚಿನ್ನಾಭರಣಕ್ಕಾಗಿ ನೆರೆಮನೆಯ ವೃದ್ಧೆಯನ್ನೇ ಭೀಕರವಾಗಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಜುಲೈ 15 ರಿಂದ ಕಾಣೆಯಾಗಿದ್ದ ಜಯಮ್ಮ ಎಂಬ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನೆರೆಮನೆಯ ನಿವಾಸಿ ಆರೋಪಿ ಅಮಿತ್ ಎಂಬಾತನನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣ: ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಪಾರ ಪ್ರಮಾಣದ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದ ಆರೋಪಿ ಅಮಿತ್, ವೃದ್ಧೆ ಜಯಮ್ಮ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಲು ಈ ಭೀಕರ ಸಂಚು ರೂಪಿಸಿದ್ದ.
ಘಟನೆ ನಡೆದಿದ್ದು ಹೇಗೆ?: ಜಯಮ್ಮ ಅವರು ಯಾರಿಗೋ ಕರೆ ಮಾಡಲು ಫೋನ್ ಕೇಳಲೆಂದು ಅಮಿತ್ ಬಳಿ ಹೋಗಿದ್ದಾಗ, ಅವರ ಮೈಮೇಲಿದ್ದ ಚಿನ್ನಾಭರಣ ಕಂಡ ಆರೋಪಿಗೆ ದುರಾಸೆ ಹುಟ್ಟಿದೆ. ಕೂಡಲೇ ಜಯಮ್ಮ ಅವರ ಉಸಿರುಗಟ್ಟಿಸಿ ದಾರುಣವಾಗಿ ಕೊಲೆ ಮಾಡಿದ್ದಾನೆ.
ಹಾಡಹಗಲೇ ಶವ ರವಾನೆ: ಕೊಲೆಯ ನಂತರ ಅವರ ಮೈಮೇಲಿದ್ದ ಚಿನ್ನಾಭರಣ ದೋಚಿದ ಆರೋಪಿ, ಶವವನ್ನು ದೊಡ್ಡ ಸೂಟ್‌ಕೇಸ್‌ಗೆ ತುಂಬಿದ್ದಾನೆ. ರಾತ್ರಿ ವೇಳೆ ಅನುಮಾನ ಬರಬಹುದೆಂದು ಭಾವಿಸಿ, ಹಾಡಹಗಲೇ ಆಟೋ ಬುಕ್ ಮಾಡಿ ಸೂಟ್‌ಕೇಸ್‌ನಲ್ಲಿ ಶವವನ್ನು ಸಾಗಿಸಿ ರಾಮೋಹಳ್ಳಿ ಕೆರೆಗೆ ಎಸೆದು ಪರಾರಿಯಾಗಿದ್ದ.
ಆರೋಪಿಯ ಕಪಟ ನಾಟಕ ಬಯಲು: ಇಷ್ಟೆಲ್ಲಾ ಕೃತ್ಯ ಎಸಗಿದ ಬಳಿಕವೂ ಏನೂ ತಿಳಿಯದವನಂತೆ ನಟಿಸಿದ್ದ ಆರೋಪಿ, ಜಯಮ್ಮ ಕಾಣೆಯಾದಾಗ ಅವರ ಕುಟುಂಬಸ್ಥರು ಹಾಗೂ ಪೊಲೀಸರ ಜೊತೆ ಸೇರಿ ತಾನೂ ಹುಡುಕಾಟ ನಡೆಸುವಂತೆ ದೊಡ್ಡ ನಾಟಕವಾಡಿದ್ದ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕುಂಬಳಗೋಡು ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ವಿಚಾರಣೆ ನಡೆಸಿದಾಗ ಆರೋಪಿಯ ಕಪಟ ನಾಟಕ ಬಯಲಾಗಿದೆ. ಸದ್ಯ ಆರೋಪಿ ಅಮಿತ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಕಾಯ್ದಿರಿಸಲಾಗಿದೆ.



