ಅಕ್ರಮ ವಲಸಿಗರ ಮತದಾನದ ಹಕ್ಕು ದೇಶದ ಭದ್ರತೆಗೆ ಅಪಾಯ: ಆರ್. ಅಶೋಕ್ ಎಚ್ಚರಿಕೆ

ಬೆಂಗಳೂರು: “ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರು ರಾಜ್ಯದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರೆ ಅದು ದೇಶದ ಭದ್ರತೆಗೆ ದೊಡ್ಡ ಸಂಚಕಾರ ತರಲಿದೆ,” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಕಳ್ಳ ಓಟುಗಳನ್ನು ಸೇರಿಸಲು ಅವಕಾಶ ನೀಡಬಾರದು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಅನೇಕರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದರೆ ಅವರು ಖಾಯಂ ನಾಗರಿಕರಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಾರ್ಯಾಗಾರದಲ್ಲಿ ಚರ್ಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಮುಖ್ಯಮಂತ್ರಿಗಳು ತಾವು ಸಮಾಜವಾದಿ ಎಂದು ಹೇಳುತ್ತಲೇ ಮಗ ಯತೀಂದ್ರರನ್ನು ಆಶೀರ್ವದಿಸಿ ಎನ್ನುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೋ ಅಥವಾ ರಾಜರ ಆಡಳಿತವೋ?” ಎಂದು ಪ್ರಶ್ನಿಸಿದ ಅಶೋಕ್, “ಡಾ. ಅಂಬೇಡ್ಕರ್ ಅವರು ರಾಜಪ್ರಭುತ್ವ ಕೊನೆಗೊಳಿಸಿ ಪ್ರಜಾಪ್ರಭುತ್ವ ತಂದರು. ಆದರೆ ಸಿದ್ದರಾಮಯ್ಯ ಅವರು ಯುವರಾಜನ ಪಟ್ಟಾಭಿಷೇಕಕ್ಕೆ ಮುಂದಾಗುವ ಮೂಲಕ ಅಂಬೇಡ್ಕರ್ ಸಿದ್ಧಾಂತಕ್ಕೆ ಅಪಚಾರ ಎಸಗುತ್ತಿದ್ದಾರೆ,” ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಅವರು, “ಇದು ಡಿನ್ನರ್ ಪಾರ್ಟಿ ಸರ್ಕಾರ. ಜನರ ಕಷ್ಟಗಳಿಗೆ ಸ್ಪಂದಿಸುವ ಬದಲು ಪ್ರತಿದಿನ ಸಕಲ ಪದಾರ್ಥಗಳೊಂದಿಗೆ ಡಿನ್ನರ್ ಪಾರ್ಟಿ ಮಾಡುವಲ್ಲಿ ಇವರು ನಿರತರಾಗಿದ್ದಾರೆ. ಬಜೆಟ್ ಸರಿ ಇಲ್ಲ ಎಂಬ ಮಾತು ಸ್ವತಃ ಕಾಂಗ್ರೆಸ್ ಶಾಸಕರೇ ಆಡುತ್ತಿದ್ದಾರೆ,” ಎಂದು ಲೇವಡಿ ಮಾಡಿದರು.
ಯುದ್ಧದ ಸಂದರ್ಭವನ್ನು ಬಳಸಿಕೊಂಡು ಎಲ್‍ಪಿಜಿ ಸಿಲಿಂಡರ್ ದುರುಪಯೋಗವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಕಾಳಸಂತೆ ತಡೆಯಲು ಎಸ್ಮಾ (ESMA) ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಆದರೆ ಮುಖ್ಯಮಂತ್ರಿಗಳು ಇಂತಹ ಗಂಭೀರ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.



