ಸಿದ್ದರಾಮಯ್ಯ ‘ಔಟ್ ಗೋಯಿಂಗ್ ಸಿಎಂ’, ರಾಜೀನಾಮೆಗೆ ದಿನಗಣನೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಗಮನಾರ್ಹ ಸಾಧನೆ ಮಾಡದ ‘ಔಟ್ ಗೋಯಿಂಗ್ ಸಿಎಂ’. ಅವರು ಶೀಘ್ರದಲ್ಲೇ ರಾಜೀನಾಮೆ ನೀಡಲು ಸಿದ್ಧವಾಗುತ್ತಿದ್ದಾರೆ” ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಮುಖ್ಯಮಂತ್ರಿಗಳ ಇತ್ತೀಚಿನ ಹೇಳಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಅಂತ್ಯದ ದಿನಗಳಲ್ಲಿದ್ದಾರೆ. ಅದಕ್ಕಾಗಿಯೇ ಈಗ ತಮ್ಮ ಮಗ ಯತೀಂದ್ರರನ್ನು ಆಶೀರ್ವದಿಸಿ ಎಂದು ಜನರ ಮುಂದೆ ಅಂಗಲಾಚುತ್ತಿದ್ದಾರೆ. ರಾಜ್ಯದ ಜನರ ಹಿತ ಕಾಯುವ ಬದಲು ಮಗನ ರಕ್ಷಣೆಗೆ ನಿಂತಿರುವುದು ಅವರ ವೈರಾಗ್ಯದ ಮಾತುಗಳನ್ನು ತೋರಿಸುತ್ತದೆ” ಎಂದು ಟೀಕಿಸಿದರು.
ದೇವರಾಜು ಅರಸು ಅವರ ದಾಖಲೆ ಮುರಿದಿದ್ದೇನೆ ಎನ್ನುವ ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯ ಅವರು ಅರಸು ಅವರ ಆಡಳಿತದ ಅವಧಿಯ ದಾಖಲೆ ಮುರಿದಿರಬಹುದು, ಆದರೆ ಕೊಡುಗೆಗಳ ದಾಖಲೆ ಮುರಿಯಲು ಸಾಧ್ಯವಿಲ್ಲ. 17 ಬಜೆಟ್ ಮಂಡಿಸಿರುವುದು ಕೇವಲ ಸಂಖ್ಯೆಯ ದಾಖಲೆಯಷ್ಟೇ, ಜನರಿಗೆ ಸಿಕ್ಕಿದ್ದು ಶೂನ್ಯ” ಎಂದರು.
ಸಿದ್ದರಾಮಯ್ಯ ಅವರು ದಲಿತ ವಿರೋಧಿ. ಎಸ್ಸಿಪಿ/ಟಿಎಸ್ಪಿ ಯೋಜನೆಯ ಸುಮಾರು 15 ಸಾವಿರ ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ದಲಿತರಿಗೆ ದ್ರೋಹ ಬಗೆದಿದ್ದಾರೆ. ದಲಿತರು ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳನ್ನು ಕಸಿದುಕೊಂಡಿದ್ದೇ ಇವರು,” ಎಂದು ಗಂಭೀರವಾಗಿ ಆರೋಪಿಸಿದರು.
ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡುವ ಜಾಹೀರಾತು ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ, “ಇದು ರೈತರ ಹಿತಾಸಕ್ತಿಗೆ ಮಾರಕ. ಜನರನ್ನು ವಂಚಿಸುವ ಮತ್ತು ಅನ್ನದಾತರಿಗೆ ತೊಂದರೆ ಕೊಡುವ ಇಂತಹ ಜಾಹೀರಾತುಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಸ್ಥಾನ ಕಳೆದುಕೊಳ್ಳಲಿದ್ದಾರೆ. ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದವರಿಗೆ ಈಗ ಆ ತಾಖತ್ತು ಇಲ್ಲದಂತಾಗಿದೆ,” ಎಂದು ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.



