ಬೆಂಗಳೂರು: ಲಿವಿಂಗ್ ಟುಗೆದರ್ನಲ್ಲಿದ್ದ ಯುವತಿಯ ಹತ್ಯೆ; ಕೇಬಲ್ ವೈಯರ್ನಿಂದ ಕುತ್ತಿಗೆ ಬಿಗಿದು ಕೊಂದ ಪ್ರಿಯಕರ

ಬೆಂಗಳೂರು: ರಾಜಧಾನಿಯ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಯುವತಿಯನ್ನು ಆಕೆಯ ಪ್ರಿಯಕರನೇ ಕೇಬಲ್ ವೈಯರ್ನಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆಯೇ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಕೊಡಗು ಮೂಲದ ರಂಜಿತಾ (23) ಕೊಲೆಯಾದ ದುರ್ದೈವಿ. ಅದೇ ಊರಿನ ಅಯ್ಯಪ್ಪ ಎಂಬಾತನೇ ಈ ಕೊಲೆ ಮಾಡಿದ ಆರೋಪಿ. ಕೊಡಗಿನ ಪೊನ್ನಂಪೇಟೆ ಮೂಲದ ಇವರಿಬ್ಬರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ವರ್ತೂರು ವ್ಯಾಪ್ತಿಯಲ್ಲಿ ಒಟ್ಟಿಗೆ ವಾಸವಿದ್ದರು. ಆರೋಪಿ ಅಯ್ಯಪ್ಪ ನಗರದ ಡ್ರೈ ಫ್ರೂಟ್ಸ್ ಅಂಗಡಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದನು.
ಆರೋಪಿ ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯ ಜೊತೆಗಿನ ಜಗಳದಿಂದಾಗಿ ಕೆಲವು ವರ್ಷಗಳ ಹಿಂದೆ ಆಕೆಯಿಂದ ದೂರವಾಗಿದ್ದನು. ನಂತರ ತನ್ನದೇ ಊರಿನ ರಂಜಿತಾಳನ್ನು ಪ್ರೀತಿಸಿದ್ದನು. ಇಬ್ಬರ ಜಾತಿ ಬೇರೆಯಾಗಿದ್ದರೂ ಸಹ, “ನಾನೇ ನಿನ್ನನ್ನು ಮದುವೆಯಾಗುತ್ತೇನೆ” ಎಂದು ಯುವತಿಯ ಪೋಷಕರನ್ನು ನಂಬಿಸಿ ಆಕೆಯನ್ನು ಬೆಂಗಳೂರಿಗೆ ಕರೆತಂದು ಸಂಸಾರ ಹೂಡಿದ್ದನು.
ಕೆಲವು ತಿಂಗಳುಗಳಿಂದ ಒಟ್ಟಿಗೆ ಇದ್ದ ಇವರ ನಡುವೆ ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೆ ಜಗಳಗಳು ಶುರುವಾಗಿದ್ದವು. ಆರೋಪಿ ಅಯ್ಯಪ್ಪ ರಂಜಿತಾಳಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ರಂಜಿತಾ ತನ್ನ ಪೋಷಕರಿಗೂ ದೂರು ನೀಡಿದ್ದಳು. ಎರಡು ದಿನಗಳ ಹಿಂದೆ ಗಲಾಟೆ ವಿಕೋಪಕ್ಕೆ ಹೋದಾಗ, ಅಯ್ಯಪ್ಪ ಮನೆಯಲ್ಲಿದ್ದ ಕೇಬಲ್ ವೈಯರ್ನಿಂದ ರಂಜಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಏನೂ ಅರಿಯದವನಂತೆ ನಟಿಸಿದ ಅಯ್ಯಪ್ಪ, ರಂಜಿತಾ ಪೋಷಕರಿಗೆ ಕರೆ ಮಾಡಿ “ನಿಮ್ಮ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಸುಳ್ಳು ಮಾಹಿತಿ ನೀಡಿದ್ದನು. ಸ್ಥಳಕ್ಕೆ ಬಂದ ರಂಜಿತಾ ಕುಟುಂಬಸ್ಥರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ವರ್ತೂರು ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ವೇಳೆ ಇದು ಆತ್ಮಹತ್ಯೆಯಲ್ಲ, ಕೇಬಲ್ ವೈಯರ್ನಿಂದ ಬಿಗಿದು ಮಾಡಿದ ಕೊಲೆ ಎಂಬುದು ದೃಢಪಟ್ಟಿದೆ. ಸದ್ಯ ಪೊಲೀಸರು ಆರೋಪಿ ಅಯ್ಯಪ್ಪನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು, ಕುಟುಂಬಸ್ಥರು ಅಂತಿಮ ಸಂಸ್ಕಾರಕ್ಕಾಗಿ ಕೊಡಗಿನ ಪೊನ್ನಂಪೇಟೆಗೆ ಕೊಂಡೊಯ್ದಿದ್ದಾರೆ.



