ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ಮೇಲೆ ದಾಳಿ: ರಾಜ್ಯಾದ್ಯಂತ ನೂರಾರು ಪ್ರಕರಣ ದಾಖಲು

ಬೆಂಗಳೂರು: ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಬಳಸುತ್ತಿದ್ದ ಜಾಲದ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ರಾಜ್ಯದ ವಿವಿಧೆಡೆ ನೂರಾರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಗೃಹಬಳಕೆ ಸಿಲಿಂಡರ್ಗಳ ದುರುಪಯೋಗ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು ನೀಡಿದ ಸೂಚನೆಯ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ದಾಳಿ: ಬೆಂಗಳೂರಿನ ಪಿಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಯಾದಗಿರಿಯಲ್ಲಿ 46, ದಾವಣಗೆರೆಯಲ್ಲಿ 13 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಪ್ರಕರಣಗಳನ್ನು ‘ಅಗತ್ಯ ವಸ್ತುಗಳ ಕಾಯ್ದೆ 1955’ರ ಅಡಿಯಲ್ಲಿ ದಾಖಲಿಸಿ, ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏಜೆನ್ಸಿ ಮೇಲೆ ಪ್ರಕರಣ: ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಅಕ್ರಮವಾಗಿ ಗ್ಯಾಸ್ ರೀಪಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ಅಂಗಡಿಯ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚನೆಯಂತೆ, ಲಭ್ಯವಿರುವ ಒಟ್ಟು ವಾಣಿಜ್ಯ ಬಳಕೆಯ ಸಿಲಿಂಡರ್ಗಳಲ್ಲಿ ಶೇ. 20ರಷ್ಟನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಗಿನ ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ ವಿತರಿಸಲು ಸೂಚಿಸಲಾಗಿದೆ:
ಆಸ್ಪತ್ರೆಗಳು, ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳು.
ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಕ್ಯಾಂಟಿನ್ಗಳು.
ಪ್ರಮುಖ ದೇವಸ್ಥಾನಗಳ ಪ್ರಸಾದ ವಿನಿಯೋಗ ಕೇಂದ್ರಗಳು.
ಸರ್ಕಾರಿ ಕಚೇರಿಗಳು, ವೃದ್ಧಾಶ್ರಮಗಳು ಮತ್ತು ಪ್ರಮುಖ ಖಾಸಗಿ ವಲಯದ ಕಚೇರಿಗಳು.
ರಾಜ್ಯಾದ್ಯಂತ ಇಂದು ಒಟ್ಟು 3,86,363 ಗೃಹಬಳಕೆಯ (14.2 ಕೆ.ಜಿ) ಸಿಲಿಂಡರ್ಗಳು ಹಾಗೂ 6,371 ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ವಿತರಿಸಲಾಗಿದೆ. ಗೃಹಬಳಕೆಯ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಕಟಣೆ ತಿಳಿಸಿದೆ.



