ಯಾದಗಿರಿಯಲ್ಲಿ ನಿರ್ಗಮಿತ ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಯಾದಗಿರಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಲವೀಶ್ ಒರಡಿಯಾ (ಐಎಎಸ್) ಅವರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಗಸ್ಟ್ ೨೦ರಂದು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿವಿಧ ಇಲಾಖೆಗಳು ಹಾಗೂ ತಾಲೂಕು ಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಲವೀಶ್ ಒರಡಿಯಾ ಅವರನ್ನು ಸನ್ಮಾನಿಸಿ, ಅವರ ಅಧಿಕಾರಾವಧಿಯ ಸೇವೆಯನ್ನು ಗೌರವಪೂರ್ವಕವಾಗಿ ಸ್ಮರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಪ್ರಭಾರ ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ (ಐಎಎಸ್) ಮಾತನಾಡಿ ನಿರ್ಗಮಿತ ಅಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವೀಕ್ ಆರ್. ಶಂಕರ್ ಹಾಗೂ ಶ್ರೀಮತಿ ಪ್ರತೀಕ್ಷಾ ಲವೀಶ್ ಒರಡಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಭಿಮಾನಿಗಳು ಪಾಲ್ಗೊಂಡು ಲವೀಶ್ ಒರಡಿಯಾ ಅವರ ಮುಂದಿನ ಭವಿಷ್ಯ ಹಾಗೂ ಸೇವಾ ಜೀವನಕ್ಕೆ ಶುಭ ಹಾರೈಸಿದರು.



