ಜೈಪುರದಲ್ಲಿ ಹತ್ಯೆ ಯತ್ನ: ಸರ್ಕಾರಿ ಉದ್ಯೋಗ, ಆಸ್ತಿಗಾಗಿ ತಾಯಿಯನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಮಗಳು!

ಜೈಪುರ: ಸರ್ಕಾರಿ ಕೆಲಸ ಹಾಗೂ ಆಸ್ತಿಯ ದುರಾಶೆಗೆ ಬಿದ್ದ ೨೩ ವರ್ಷದ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಸುಪಾರಿ ನೀಡಿ ಭೀಕರವಾಗಿ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದ ೪೫ ವರ್ಷದ ನೀರಜ್ ಶರ್ಮಾ ಕೊಲೆಯಾದ ದುರದೃಷ್ಟಕರ ತಾಯಿ. ಪತಿಯ ನಿಧನದ ನಂತರ ಇವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿತ್ತು. ತಾಯಿಯ ಮರಣದ ನಂತರ ಆ ಉದ್ಯೋಗ ಹಾಗೂ ಆಸ್ತಿ ತನಗೆ ಸಿಗುತ್ತದೆ ಎಂಬ ದುರಾಸೆಯಿಂದ ಮಗಳು ಆಯುಷಿ ಶರ್ಮಾ ಈ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ ೩ರಂದು ಪ್ರತಾಪ್ ನಗರದಲ್ಲಿ ನೀರಜ್ ಶರ್ಮಾ ಅವರು ಮಗನನ್ನು ಕೋಚಿಂಗ್ ಸೆಂಟರ್ಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ ವೇಗವಾಗಿ ಬಂದ ಎಸ್ಯುವಿ (SUV) ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನೂರು ಅಡಿ ದೂರಕ್ಕೆ ಎಸೆಯಲ್ಪಟ್ಟ ನೀರಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಸಾಮಾನ್ಯ ಹಿಟ್ ಆಂಡ್ ರನ್ ಅಪಘಾತ ಎಂದು ಭಾವಿಸಲಾಗಿತ್ತಾದರೂ, ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಇದು ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟಿದೆ.
೭ ಲಕ್ಷ ರೂಪಾಯಿಗೆ ಸುಪಾರಿ:
ಪೋಲೀಸ್ ತನಿಖೆಯ ಪ್ರಕಾರ, ಮಗಳು ಆಯುಷಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಹಾಗೂ ಸಂಬಂಧಿ ಬಲರಾಮ್ ಅವರೊಂದಿಗೆ ಸೇರಿ ಈ ಕೊಲೆಯ ಸಂಚು ರೂಪಿಸಿದ್ದಳು. ತಾಯಿಯನ್ನು ಮುಗಿಸಲು ಹೇಮಂತ್ ಶರ್ಮಾ ಎಂಬಾತನಿಗೆ ೭ ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ತಿಂಗಳಿನಿಂದ ನಿಗಾ ವಹಿಸಿದ್ದ ಆರೋಪಿಗಳು ಜುಲೈ ೩ರಂದು ಲೈವ್ ಲೋಕೇಶನ್ ಆಧರಿಸಿ ಕಾರಿನಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ.
ಘಟನೆ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಬೈಕ್ನಲ್ಲಿ ಪರಾರಿಯಾಗಿದ್ದ ಆರೋಪಿಗಳ ಸುಳಿವು ಬೆನ್ನಟ್ಟಿದ ಪೊಲೀಸರು, ಪ್ರಮುಖ ರೂವಾರಿ ಆಯುಷಿ ಸೇರಿದಂತೆ ಒಟ್ಟು ೭ ಜನ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



