ಶಿವಮೊಗ್ಗದ ಅಶೋಕ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಟ್ಟಹಾಸ – ಸರಣಿ ಅಪಘಾತ; ಆಟೋ ಚಾಲಕನಿಗೆ ಗಂಭೀರ ಗಾಯ

ಶಿವಮೊಗ್ಗ: ನಗರದ ಹೃದಯಭಾಗವಾದ ಬಿ.ಎಚ್. ರಸ್ತೆಯ ಅಶೋಕ ವೃತ್ತದಲ್ಲಿ ಇಂದು ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ ಸಂಭವಿಸಿದ್ದು, ಆಟೋ ರಿಕ್ಷಾ ಚಾಲಕರೊಬ್ಬರು ಸಾವು-ಬದುಕಿನ ನಡುವೆ ಹೋರಾಡುವಂತಾಗಿದೆ.
ಇಂದು ಬೆಳಿಗ್ಗೆ ಅಶೋಕ ವೃತ್ತದಲ್ಲಿ ಕೆಂಪು ಸಿಗ್ನಲ್ ಬಿದ್ದಿದ್ದ ಕಾರಣ ವಾಹನಗಳು ಸಾಲಾಗಿ ನಿಂತಿದ್ದವು. ಈ ವೇಳೆ ಎ.ಎ. ವೃತ್ತದ ಕಡೆಯಿಂದ ಅತಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್, ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮೊದಲು ಆಟೋಗೆ ಬಲವಾಗಿ ಗುದ್ದಿದ ಬಸ್, ನಂತರ ಆಟೋವನ್ನು ತಳ್ಳಿಕೊಂಡು ಹೋಗಿ ಮುಂದಿದ್ದ ಕಿಯಾ ಕಾರು ಹಾಗೂ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿದೆ.
ಬಸ್‌ನ ವೇಗಕ್ಕೆ ಸಿಲುಕಿದ ಆಟೋ ರಿಕ್ಷಾ ಕಾರು ಮತ್ತು ಬಸ್ ನಡುವೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆಟೋ ಚಾಲಕ ರಾಜು ಎಂಬುವವರಿಗೆ ಎದೆ, ಸೊಂಟ, ಎಡಗೈ ಹಾಗೂ ಎಡಗಾಲಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಮತ್ತು ಅಪಘಾತಕ್ಕೀಡಾದ ಇತರ ವಾಹನಗಳ ಚಾಲಕರು ಚಾಲಕನನ್ನು ಹೊರತೆಗೆಯಲು ನೆರವಾಗಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣವೇ ಕಿಯಾ ಕಾರು ಚಾಲಕ ಸುದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಷರೀಫ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಕರಿಬಸಪ್ಪ ಅವರು ಸಾರ್ವಜನಿಕರೊಂದಿಗೆ ಕೈಜೋಡಿಸಿ, ಆಟೋದಲ್ಲಿ ಸಿಲುಕಿದ್ದ ರಾಜು ಅವರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ದೇವರಾಜ್ ಅವರ ಅತಿ ವೇಗ ಮತ್ತು ಬೇಜವಾಬ್ದಾರಿಯ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಘಟನೆಯಲ್ಲಿ ಕಿಯಾ ಕಾರು ಕೂಡ ಸಾಕಷ್ಟು ಹಾನಿಗೊಳಗಾಗಿದೆ.
ಈ ಸಂಬಂಧ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




