ಬೆಂಗಳೂರಿಗರ ಗಮನಕ್ಕೆ: ಪೀಣ್ಯ ಫ್ಲೈಓವರ್ ಮೇಲೆ ಇಂದಿನಿಂದ 5 ದಿನ ಸಂಚಾರ ಬಂದ್!

ಬೆಂಗಳೂರು: ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಒಂದಾದ ಪೀಣ್ಯ ಎಲಿವೇಟೆಡ್ ಫ್ಲೈಓವರ್ (NH-4) ಮೇಲೆ ಇಂದಿನಿಂದ ಅನ್ವಯವಾಗುವಂತೆ ಏಪ್ರಿಲ್ 17ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಫ್ಲೈಓವರ್ನ ಕೇಬಲ್ ದುರಸ್ತಿ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ‘ಲೋಡ್ ಟೆಸ್ಟಿಂಗ್’ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಾರಂಭ: ಏಪ್ರಿಲ್ 13, ಬೆಳಗ್ಗೆ 5:00 ಗಂಟೆಯಿಂದ.
ಮುಕ್ತಾಯ: ಏಪ್ರಿಲ್ 17, ಬೆಳಗ್ಗೆ 11:00 ಗಂಟೆಯವರೆಗೆ.
ಸ್ಥಳ: ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್ನಿಂದ ಎಸ್ಆರ್ಎಸ್ ಡೌನ್ ರಾಂಪ್ವರೆಗಿನ ಫ್ಲೈಓವರ್ನ ಎರಡೂ ಬದಿಗಳು.
ಸೇತುವೆಯ ಮೇಲೆ ಸಂಚಾರ ನಿಷೇಧಿಸಿರುವುದರಿಂದ ವಾಹನ ಸವಾರರು ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ:
1. ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ಬರುವವರು:
ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಗಿನ ಎನ್.ಹೆಚ್.-4 ರಸ್ತೆ ಮತ್ತು ಸರ್ವಿಸ್ ರಸ್ತೆಯನ್ನು ಬಳಸಿ, 8ನೇ ಮೈಲಿ ದಾಸರಹಳ್ಳಿ → ಜಾಲಹಳ್ಳಿ ಕ್ರಾಸ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್ಆರ್ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ ಮೂಲಕ ಸಂಚರಿಸಬಹುದು.
2. ನಗರದಿಂದ ನೆಲಮಂಗಲ ಕಡೆಗೆ ಹೋಗುವವರು:
ಸಿಎಂಟಿಐ ಕಡೆಯಿಂದ ಫ್ಲೈಓವರ್ ಕೆಳಗಿನ ರಸ್ತೆ ಬಳಸಿ, ಎಸ್ಆರ್ಎಸ್ ಜಂಕ್ಷನ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ 8ನೇ ಮೈಲಿ → ಪಾರ್ಲೆ ಜಿ ಟೋಲ್ ಮೂಲಕ ಪ್ರಯಾಣಿಸಬಹುದು.
ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಈ ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ಅತ್ಯಂತ ಅವಶ್ಯಕವಾಗಿದೆ. ಫ್ಲೈಓವರ್ ಕೆಳಗಿನ ರಸ್ತೆಯಲ್ಲಿ ವಾಹನಗಳ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕೆಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಕೋರಿದೆ.



