ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ನಾಲ್ಕು ದಿನಗಳ ಬಳಿಕ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ: ಶೋಧ ಕಾರ್ಯ ಯಶಸ್ವಿ

Share News

ಮಡಿಕೇರಿ: ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶರಣ್ಯ (36) ಅವರು ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕೇರಳದ ಟೆಕ್ಕಿ ಶರಣ್ಯ ಅವರು ಕಳೆದ ಗುರುವಾರ ಬೆಳಿಗ್ಗೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾಗ ದಾರಿ ತಪ್ಪಿ ನಾಪತ್ತೆಯಾಗಿದ್ದರು. ದಟ್ಟ ಅರಣ್ಯ ಮತ್ತು ಪ್ರತಿಕೂಲ ಹವಾಮಾನದ ನಡುವೆ ಅವರು ಪತ್ತೆಯಾಗದಿದ್ದಾಗ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿ ಬೃಹತ್ ಶೋಧ ಕಾರ್ಯ ಆರಂಭಿಸಿತ್ತು.

ಶರಣ್ಯ ಅವರ ಪತ್ತೆಗಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗ್ರಾಮಸ್ಥರು ಹಾಗೂ ನಕ್ಸಲ್ ನಿಗ್ರಹ ಪಡೆ (ANF) ಜಂಟಿಯಾಗಿ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದವು. ಈ ಶೋಧ ಕಾರ್ಯದಲ್ಲಿ ಸ್ಥಳೀಯ ಕುಡಿಯ ಸಮುದಾಯದವರ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು. ಇಂದು ಸಂಜೆ ಅರಣ್ಯದ ಆಳ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ಸ್ಥಳೀಯ ಕುಡಿಯ ಸಮುದಾಯದ ತಂಡಕ್ಕೆ ಶರಣ್ಯ ಅವರು ಪತ್ತೆಯಾಗಿದ್ದಾರೆ.

ಕಾರ್ಯಾಚರಣೆಯ ಯಶಸ್ಸಿನ ಬಳಿಕ ಶಾಸಕ ಎ.ಎಸ್. ಪೊನ್ನಣ್ಣ ಅವರು ಶರಣ್ಯ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಸತತ 4 ದಿನಗಳ ಕಾಲ ಹಗಲಿರುಳು ಶ್ರಮಿಸಿದ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ, ಬೆನ್ನೆಲುಬಾಗಿ ನಿಂತ ಗ್ರಾಮಸ್ಥರು ಹಾಗೂ ಶೋಧ ಕಾರ್ಯಕ್ಕೆ ಆಧುನಿಕ ಉಪಕರಣಗಳನ್ನು ಒದಗಿಸಿದ ರಾಜ್ಯ ಸರ್ಕಾರಕ್ಕೆ ಶಾಸಕರು ಅಭಿನಂದನೆ ಮತ್ತು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಾಲ್ಕು ದಿನಗಳ ಕಾಲ ಕಾಡಿನಲ್ಲೇ ಕಳೆದಿದ್ದರಿಂದ ಶರಣ್ಯ ಅವರು ಸ್ವಲ್ಪ ಸುಸ್ತಾಗಿದ್ದು, ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!